ಮಂಗಳೂರು, ಆ. 7: ಗ್ರಂಥಾಲಯಗಳು ಕೇವಲ ಪುಸ್ತಕಗಳ ಸಂಗ್ರಹ ಕೇಂದ್ರಗಳಾಗಿರದೆ, ವಿದ್ಯಾರ್ಥಿಗಳ ಜ್ಞಾನಾರ್ಜನೆ, ಚಿಂತನಾ ಸಾಮರ್ಥ್ಯ ಹಾಗೂ ವ್ಯಕ್ತಿತ್ವ ವಿಕಾಸಕ್ಕೆ ಪೂರಕವಾದ ಜ್ಞಾನಕೇಂದ್ರಗಳಾಗಬೇಕು ಎಂದು ಕೆನರಾ ಮ್ಯೂಸಿಯಂನ ನಿರ್ದೇಶಕ ಪಯ್ಯನ್ನೂರು ರಮೇಶ್ ಪೈ ಹೇಳಿದರು.
ಕೆನರಾ ಕಾಲೇಜು (ಸ್ವಾಯತ್ತ), ಮಂಗಳೂರಿನ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರದ ವತಿಯಿಂದ ಶುಕ್ರವಾರ ಶ್ರೀಮತಿ ರತ್ನಾ ಎಸ್.ಶೆಣೈ ಸ್ಮಾರಕ ಸಭಾಂಗಣದಲ್ಲಿ ಆಯೋಜಿಸಿದ್ದ ಡಾ.ಎಸ್.ಆರ್.ರಂಗನಾಥನ್ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ಕ್ಷೇತ್ರಕ್ಕೆ ಡಾ.ಎಸ್. ಆರ್.ರಂಗನಾಥನ್ ಅವರು ನೀಡಿದ ಕೊಡುಗೆ ಅಪಾರವಾಗಿದೆ. ಅವರು ಪ್ರತಿಪಾದಿಸಿದ ‘ಗ್ರಂಥಾಲಯ ವಿಜ್ಞಾನದ ಐದು ನಿಯಮಗಳು’ (Five Laws of Library Science) ಇಂದಿಗೂ ಆಧುನಿಕ ಗ್ರಂಥಾಲಯ ವ್ಯವಸ್ಥೆ ಮತ್ತು ನಿರ್ವಹಣೆಯ ಪ್ರಮುಖ ತತ್ವಗಳಾಗಿ ಮಹತ್ವ ಪಡೆದಿವೆ ಎಂದು ಅವರು ವಿವರಿಸಿದರು.
ವಿದ್ಯಾರ್ಥಿಗಳು ತಮ್ಮ ಜ್ಞಾನವನ್ನು ವಿಸ್ತರಿಸಿಕೊಳ್ಳಲು ಗ್ರಂಥಾಲಯದ ವಿವಿಧ ಸಂಪನ್ಮೂಲಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು. ಇಂದಿನ ಡಿಜಿಟಲ್ ಯುಗದಲ್ಲಿಯೂ ಓದುವ ಹವ್ಯಾಸವನ್ನು ಬೆಳೆಸಿಕೊಳ್ಳುವುದು ಅತ್ಯಂತ ಅಗತ್ಯ. ನಿರಂತರ ಓದು ವ್ಯಕ್ತಿಯ ಜ್ಞಾನವನ್ನು ವೃದ್ಧಿಸುವುದರ ಜೊತೆಗೆ, ಆತನ ಚಿಂತನಾ ಶಕ್ತಿ ಹಾಗೂ ವ್ಯಕ್ತಿತ್ವವನ್ನು ರೂಪಿಸುತ್ತದೆ ಎಂದು ಪಯ್ಯನ್ನೂರು ರಮೇಶ್ ಪೈ ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೆನರಾ ಕಾಲೇಜು (ಸ್ವಾಯತ್ತ)ಯ ಪ್ರಾಂಶುಪಾಲರಾದ ಡಾ.ಪ್ರೇಮಲತಾ ವಿ. ಅವರು ಗ್ರಂಥಾಲಯದ ಮಹತ್ವವನ್ನು ವಿದ್ಯಾರ್ಥಿಗಳು ಅರಿತುಕೊಂಡು, ಅದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ಹೇಳಿದರು.
ಕು.ವೈಷ್ಣವಿ ಪೈ ನಿರೂಪಿಸಿದರು.ಕಾಲೇಜಿನ ಗ್ರಂಥಪಾಲಕರಾದ ಶ್ರೀಮತಿ ಶ್ರುತಿ ಸ್ವಾಗತಿಸಿದರು. ವಿದ್ಯಾರ್ಥಿನಿ ಕು.ನೇಹಾ ಆರ್. ವಂದಿಸಿದರು.

