ಕಾಸರಗೋಡು: ವಿಶ್ವಹಿಂದೂ ಪರಿಷತ್ ಕಾಸರಗೋಡು ಪ್ರಖಂಡದ ವತಿಯಿಂದ ‘ರಾಮಾಯಣ ಕಥಾ ಸತ್ಸಂಗ’ ಕಾರ್ಯಕ್ರಮ ಆ.10ರಿಂದ 12ರವರೆಗೆ ಕಾಸರಗೋಡಿನ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ನಡೆಯಲಿದೆ.
ಪ್ರತಿದಿನ ಸಂಜೆ 5ರಿಂದ ಸತ್ಸಂಗ ಕಾರ್ಯಕ್ರಮ ಜರುಗಲಿದೆ. ಆ.10ರಂದು ಸಂಜೆ 5ಕ್ಕೆ ನಡೆಯುವ ಉದ್ಘಾಟನಾ ಸಮಾರಂಭವನ್ನು ಧಾರ್ಮಿಕ ಮುಂದಾಳು ಡಾ. ಅನಂತ ಕಾಮತ್ ಉದ್ಘಾಟಿಸುವರು. ಕನ್ನಡ ಭವನ ಗ್ರಂಥಾಲಯದ ಸ್ಥಾಪಕ ಡಾ. ವಾಮನ್ ರಾವ್ ಬೇಕಲ್ ಹಾಗೂ ವಿಎಚ್ಪಿ ಕಣ್ಣೂರು ವಿಭಾಗದ ಪ್ರಮುಖ್ ಸಂಕಪ್ಪ ಭಂಡಾರಿ ಉಪಸ್ಥಿತರಿರುವರು. ಬಳಿಕ ವಿದುಷಿ ವೈಭವಿ ಕುಂಬ್ಳೆ ಸೀತಾರಾಂ ‘ಸೀತಾರಾಂ ಕಲ್ಯಾಣ’ ಎಂಬ ಹರಿಕಥೆ ನಡೆಸಿಕೊಡುವರು.

ಆ.11ರಂದು ಸಂಜೆ 5ಕ್ಕೆ ಧಾರ್ಮಿಕ ಮುಂದಾಳು ಮೀರಾ ಕಾಮತ್ ದೀಪ ಪ್ರಜ್ವಲನೆ ನೆರವೇರಿಸುವರು. ಸುರೇಂದ್ರ ಆಚಾರ್ಯ ಕಾಸರಗೋಡು ಉಪಸ್ಥಿತರಿರುವರು. ಹರಿದಾಸ ಜಯಾನಂದ ಕುಮಾರ್ ಹೊಸದುರ್ಗ ಅವರಿಂದ ರಾಮಾಯಣ ಪ್ರವಚನ ನಡೆಯಲಿದೆ.
ಆ.12ರಂದು ಸಂಜೆ 5ಕ್ಕೆ ನಡೆಯುವ ಸಮಾರಂಭದಲ್ಲಿ ಡಾ. ಕೆ.ಎನ್. ಬಲ್ಲಾಳ್ ದೀಪ ಪ್ರಜ್ವಲಿಸುವರು. ಲಕ್ಷ್ಮಣೋಜಿ ರಾವ್ ಬಹುಮಾನ್ ಪಿಲಿಕುಂಜೆ ಉಪಸ್ಥಿತರಿರುವರು. ಇದೇ ಸಂದರ್ಭದಲ್ಲಿ ಕುತ್ಯಾಳ ಶ್ರೀ ಗೋಪಾಲಕೃಷ್ಣ ಯಕ್ಷಗಾನ ತರಬೇತಿ ಕೇಂದ್ರದ ರಜತೋತ್ಸವದ ಅಂಗವಾಗಿ ವಿಶೇಷ ತಾಳಮದ್ದಳೆ ‘ಪಾದುಕಾ ಪ್ರದಾನ’ ಪ್ರದರ್ಶನ ನಡೆಯಲಿದೆ.

