ನವದೆಹಲಿ: ಹಿಂದೂ ರಕ್ಷಾ ದಳ ಮಂಗಳವಾರ ಉತ್ತರ ಪ್ರದೇಶದ ಸಹರಾನ್ಪುರದಲ್ಲಿರುವ ಪ್ರಸಿದ್ಧ ಇಸ್ಲಾಮಿಕ್ ಜ್ಞಾನ ಕೇಂದ್ರ ದಾರುಲ್ ಉಲೂಮ್ ದಿಯೋಬಂದ್ಗೆ ಆಗಸ್ಟ್ 11ರಂದು ಗಂಗಾಜಲವನ್ನು ಅರ್ಪಿಸಲು ತನ್ನ ಸದಸ್ಯರು ಭೇಟಿ ನೀಡಲಿದ್ದಾರೆ ಎಂದು ಘೋಷಿಸಿದೆ. ಸಂಸ್ಥೆಯ ಅಡಿಯಲ್ಲಿ ಶಿವಲಿಂಗವಿದೆ ಎಂಬ ವಿವಾದಾತ್ಮಕ ಹೇಳಿಕೆಯೊಂದಿಗೆ ಸಂಘಟನೆಯ ಘೋಷಣೆ ಬಂದಿದೆ.
ಹಿಂದೂ ರಕ್ಷಾ ದಳ ಉತ್ತರಾಖಂಡ ರಾಜ್ಯ ಅಧ್ಯಕ್ಷ ಲಲಿತ್ ಶರ್ಮಾ ಅವರು ಶನಿವಾರ ಬಿಡುಗಡೆ ಮಾಡಿದ ವೀಡಿಯೊ ಸಂದೇಶದಲ್ಲಿ ಇದನ್ನು ಘೋಷಿಸಿದ್ದಾರೆ. ಸಂಘಟನೆಯ ರಾಷ್ಟ್ರೀಯ ಅಧ್ಯಕ್ಷೆ ಪಿಂಕಿ ಚೌಧರಿ ನೇತೃತ್ವದಲ್ಲಿ ಕಾರ್ಯಕರ್ತರು ಗಂಗಾಜಲದೊಂದಿಗೆ ಹರಿದ್ವಾರದಿಂದ ದಿಯೋಬಂದ್ಗೆ ಪ್ರಯಾಣ ಬೆಳೆಸಲಿದ್ದಾರೆ ಎಂದು ಲಲಿತ್ ಶರ್ಮಾ ಘೋಷಿಸಿದ್ದಾರೆ.
ದಾರುಲ್ ಉಲೂಮ್ ಆವರಣದಲ್ಲಿ ಶಿವ ದೇವಾಲಯವಿದೆ ಎಂಬ ತಮ್ಮ ಹೇಳಿಕೆಯ ಬಗ್ಗೆ ತನಿಖೆ ನಡೆಸುವಂತೆ ಕೋರಿ ಸಂಘಟನೆಯು ಈ ಹಿಂದೆ ಸಹರಾನ್ಪುರ ಆಡಳಿತವನ್ನು ಸಂಪರ್ಕಿಸಿತ್ತು, ಆದರೆ ದೂರಿನ ಬಗ್ಗೆ ಯಾವುದೇ ಕ್ರಮ ಕೈಗೊಳ್ಳಲಿಲ್ಲ ಎಂದು ಲಲಿತ್ ಶರ್ಮಾ ಆರೋಪಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ನೇರವಾಗಿ ಸಂಸ್ಥೆಗೆ ಹೋಗಿ ಗಂಗಾ ಜಲವನ್ನು ಅರ್ಪಿಸಲು ನಿರ್ಧರಿಸಿದ್ದಾರೆ ಎಂದು ಅವರು ವೀಡಿಯೊದಲ್ಲಿ ತಿಳಿಸಿದ್ದಾರೆ.

ಈ ಮದ್ಯೆ ಪ್ರಚೋದನಕಾರಿ ಕ್ರಮವನ್ನು ಎದುರಿಸಲು ಪೊಲೀಸರು ಕಠಿಣ ಎಚ್ಚರಿಕೆ ನೀಡಿದ್ದಾರೆ. ಶಾಂತಿಯನ್ನು ಭಂಗಗೊಳಿಸುವ ಯಾವುದೇ ಪ್ರಯತ್ನಕ್ಕೆ ಅವಕಾಶ ನೀಡಲಾಗುವುದಿಲ್ಲ ಎಂದು ದಿಯೋಬಂದ್ ವೃತ್ತ ಅಧಿಕಾರಿ ಅಮಿತ್ ಕುಮಾರ್ ಸಿಂಗ್ ಹೇಳಿದ್ದಾರೆ. ವಾತಾವರಣವನ್ನು ಕದಡಲು ಪ್ರಯತ್ನಿಸುವ ಯಾರ ವಿರುದ್ಧವೂ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ .
ದಿಯೋಬಂದ್ ಇರುವ ಸ್ಥಳದಲ್ಲಿ ಒಂದು ಕಾಲದಲ್ಲಿ ಶಿವನ ದೇವಾಲಯವಿತ್ತು ಎಂದು ಹಿಂದೂ ಸಂಘಟನೆಗಳು ಈ ಹಿಂದೆ ಹೇಳಿಕೊಂಡಿವೆ. ಹಿಂದೂ ರಕ್ಷಾ ದಳ ಎಂಬ ಸಂಘಟನೆಯು ಜಿಲ್ಲಾ ಕೇಂದ್ರದಲ್ಲಿ ಪ್ರತಿಭಟನೆ ನಡೆಸಿ, ಈ ಹಕ್ಕಿನ ತನಿಖೆಗೆ ಒತ್ತಾಯಿಸಿ ಅರ್ಜಿ ಸಲ್ಲಿಸಿತ್ತು.
ಪ್ರತಿಭಟನೆಯ ನೇತೃತ್ವ ವಹಿಸಿದ್ದ ಹಿಂದೂ ರಕ್ಷಾದ್ವಾಲಾ ದಳದ ನಾಯಕ ಲಲಿತ್ ಶರ್ಮಾ, ದಾರುಲ್ ಉಲೂಮ್ ದಿಯೋಬಂದ್ ಕ್ಯಾಂಪಸ್ನಿಂದ ಸುಮಾರು 14 ಅಡಿ ಕೆಳಗೆ ಶಿವ ದೇವಾಲಯವು ಮಣ್ಣಿನಡಿಯಲ್ಲಿ ಹೂತುಹೋಗಿದೆ ಎಂದು ಹೇಳಿಕೊಳ್ಳುತ್ತಾರೆ.

