ನವದೆಹಲಿ : ಭಾರತದ 80ನೇ ಸ್ವಾತಂತ್ರ್ಯ ದಿನಾಚರಣೆಯು ಈ ಬಾರಿ ಐತಿಹಾಸಿಕ ಕೆಂಪುಕೋಟೆಯಲ್ಲಿ ಅಪೂರ್ವ ಕ್ಷಣಕ್ಕೆ ಸಾಕ್ಷಿಯಾಗಲಿದೆ. ಆಗಸ್ಟ್ 15ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ರಾಷ್ಟ್ರಧ್ವಜಾರೋಹಣ ನೆರವೇರಿಸುವ ಮುನ್ನ, ಇದೇ ಮೊದಲ ಬಾರಿಗೆ ಕೆಂಪುಕೋಟೆಯಲ್ಲಿ ‘ವಂದೇ ಮಾತರಂ’ ಗಾಯನ ಮೊಳಗಲಿದೆ.
ಕೇಂದ್ರ ಸರ್ಕಾರದ ಈ ನಿರ್ಧಾರವು ಕೇವಲ ಸ್ವಾತಂತ್ರ್ಯೋತ್ಸವದ ಕಾರ್ಯಕ್ರಮದ ಬದಲಾವಣೆಯಾಗಿ ಉಳಿಯದೆ, ರಾಷ್ಟ್ರಗೀತೆ ಮತ್ತು ರಾಷ್ಟ್ರೀಯ ಗೀತೆಯ ಸ್ಥಾನಮಾನ ಕುರಿತ ರಾಜಕೀಯ, ಸಾಂಸ್ಕೃತಿಕ ಹಾಗೂ ಸಾಂವಿಧಾನಿಕ ಚರ್ಚೆಗಳಿಗೆ ಹೊಸ ಆಯಾಮ ನೀಡಿದೆ.

ಪ್ರತಿವರ್ಷ ಕೆಂಪುಕೋಟೆಯಲ್ಲಿ ಪ್ರಧಾನಿ ರಾಷ್ಟ್ರಧ್ವಜಾರೋಹಣ, ದೇಶವನ್ನು ಉದ್ದೇಶಿಸಿ ಭಾಷಣ ಮತ್ತು ರಾಷ್ಟ್ರಗೀತೆ ಮೊಳಗುವುದು ಸ್ವಾತಂತ್ರ್ಯ ದಿನಾಚರಣೆಯ ಪ್ರಮುಖ ಭಾಗವಾಗಿದೆ. ಆದರೆ 2026ರ ಆಚರಣೆಯಲ್ಲಿ ಇದೇ ಕ್ರಮಕ್ಕೆ ‘ವಂದೇ ಮಾತರಂ’ ಎಂಬ ಹೊಸ ಪ್ರಮುಖ ಅಂಶ ಸೇರ್ಪಡೆಯಾಗುತ್ತಿದೆ. ಪ್ರಧಾನಿ ಮೋದಿ ಕೆಂಪುಕೋಟೆಗೆ ಆಗಮಿಸುವ ಸಂದರ್ಭದಲ್ಲಿ ಈ ಗೀತೆಯನ್ನು ಹಾಡಲಾಗುತ್ತದೆ. ಬಳಿಕ ರಾಷ್ಟ್ರಧ್ವಜಾರೋಹಣ ಮತ್ತು ಪ್ರಧಾನಿಯವರ ಭಾಷಣ ನಡೆಯಲಿದೆ. ಹೀಗಾಗಿ ಸ್ವಾತಂತ್ರ್ಯೋತ್ಸವದ ಅಧಿಕೃತ ವೇದಿಕೆಯಲ್ಲಿ ‘ವಂದೇ ಮಾತರಂ’ಗೆ ನೀಡಲಾಗುತ್ತಿರುವ ಸ್ಥಾನ ಗಮನ ಸೆಳೆದಿದೆ.
ವಂದೇ ಮಾತರಂ’ಗೆ ರಾಷ್ಟ್ರಗೀತೆ ‘ಜನ ಗಣ ಮನ’ದಷ್ಟೇ ಗೌರವ ಮತ್ತು ಕಾನೂನು ರಕ್ಷಣೆ ದೊರೆಯಬೇಕು ಎಂಬ ವಾದವನ್ನು ಬಿಜೆಪಿ ಹಾಗೂ ಕೇಂದ್ರ ಸರ್ಕಾರ ಮುಂದಿಟ್ಟಿವೆ. ಈ ಹಿನ್ನೆಲೆ ‘Prevention of Insults to National Honour (Amendment) Bill, 2026’ ಮಹತ್ವ ಪಡೆದಿದೆ. ಜುಲೈ 24ರಂದು ರಾಜ್ಯಸಭೆಯಲ್ಲಿ ಮಂಡನೆಯಾದ ಮಸೂದೆಯು 1971ರ ಕಾನೂನಿಗೆ ತಿದ್ದುಪಡಿ ಮಾಡಿ, ರಾಷ್ಟ್ರಗೀತೆಗೆ ಅನ್ವಯಿಸುವ ನಿರ್ದಿಷ್ಟ ರಕ್ಷಣೆಯನ್ನು ‘ವಂದೇ ಮಾತರಂ’ಗೂ ವಿಸ್ತರಿಸುವ ಉದ್ದೇಶ ಹೊಂದಿತ್ತು. ರಾಜ್ಯಸಭೆ ಜುಲೈ 29ರಂದು ಮತ್ತು ಲೋಕಸಭೆ ಜುಲೈ 30ರಂದು ಈ ಮಸೂದೆಯನ್ನು ಅಂಗೀಕರಿಸಿದವು.

