ಧಾರವಾಡ : ಬಸವಪೂರ್ವ ಯುಗದ ಚಾರಿತ್ರಿಕ ಘನತೆಯ ತಾಲೂಕಿನ ಅಮ್ಮಿನಬಾವಿ ಗ್ರಾಮದ ಸಂಸ್ಥಾನ ಪಂಚಗೃಹ ಹಿರೇಮಠದಲ್ಲಿ ಪವಿತ್ರ ಶ್ರಾವಣ ಮಾಸದ ಅಂಗವಾಗಿ ಶ್ರೀಮಠದ ಕಿರಿಯ ಶ್ರೀಗಳಾದ ಅಭಿನವ ಶಾಂತಲಿಂಗ ಶಿವಾಚಾರ್ಯ ಸ್ವಾಮಿಗಳ ಸಾಮೂಹಿಕ ಇಷ್ಟಲಿಂಗ ಮಹಾಪೂಜೆ ಆಗಷ್ಟ್-13 ರಂದು ಪ್ರಾರಂಭಗೊಳ್ಳಲಿದೆ.
ಲೋಕಕಲ್ಯಾಣ ಮತ್ತು ವಿಶ್ವಶಾಂತಿ ಸಂಕಲ್ಪದೊಂದಿಗೆ ಒಂದು ತಿಂಗಳ ಕಾಲ ನಡೆಯಲಿರುವ ಈ ಇಷ್ಟಲಿಂಗ ಮಹಾಪೂಜೆಯನ್ನು ಶ್ರೀಮಠದ ಹಿರಿಯ ಶ್ರೀಗಳಾದ ಶಾಂತಲಿ0ಗ ಶಿವಾಚಾರ್ಯ ಸ್ವಾಮೀಜಿ ಗುರುವಾರ ಕಿರಿಯ ಶ್ರೀಗಳ ಇಷ್ಟಲಿಂಗಕ್ಕೆ ಪಂಚಾಮೃತವನ್ನು ಧಾರೆ ಎರೆಯುವ ಮೂಲಕ ಚಾಲನೆ ನೀಡುವರು. ಸಪ್ಟಂಬರ್-10ರವರೆಗೆ ಮಠದ ಪ್ರಾಂಗಣದಲ್ಲಿ ನಿತ್ಯ ಪ್ರಾತಃಕಾಲ 8 ಗಂಟೆಗೆ ಜರುಗುವ ಈ ಸಾಮೂಹಿಕ ಇಷ್ಟಲಿಂಗ ಮಹಾಪೂಜೆಯಲ್ಲಿ ಸಮಸ್ತ ಸದ್ಭಕ್ತ ಸಮೂಹ ಮುಕ್ತವಾಗಿ ಪಾಲ್ಗೊಳ್ಳಬಹುದಾಗಿದೆ. ನಿತ್ಯವೂ ಮಹಾಪೂಜೆಯ ನಂತರ ದಾಸೋಹ ಸೇವೆಯಲ್ಲಿ ಪಾಲ್ಗೊಂಡ ಭಕ್ತಗಣಕ್ಕೆ ಅನ್ನಸಂತರ್ಪಣೆ ನಡೆಯುವುದು.

ನಿತ್ಯ ರುದ್ರಾಭಿಷೇಕ : ಶ್ರೀಮಠದ ಕರ್ತೃ ಪುರುಷರಾದ ಶ್ರೀಗುರುಶಾಂತಲಿಂಗ ಶಿವಯೋಗಿಗಳ ಗದ್ದುಗೆಗೆ ಹಾಗೂ ಕ್ಷೇತ್ರನಾಥ ಶ್ರೀವೀರಭದ್ರಸ್ವಾಮಿಗೆ ನಿತ್ಯವೂ ಪ್ರಾತಃಕಾಲದಲ್ಲಿ ಏಕಾದಶ ಮಹಾರುದ್ರಾಭಿಷೇಕ, ನೂರೊಂದು ಬಿಲ್ವಾರ್ಚನೆ ಹಾಗೂ ಮಹಾಮಂಗಳಾರತಿಯ ವಿಶೇಷ ಪೂಜಾ ಕೈಂಕರ್ಯಗಳು ವೈದಿಕರಾದ ಸೋಮಲಿಂಗಶಾಸ್ತಿç ಗುಡ್ಡದಮಠ, ಶಿವಾನಂದಸ್ವಾಮಿ, ಶಿವಯೋಗಿಸ್ವಾಮಿ, ವಿನಾಯಕ, ರೇಣುಕಾಚಾರ್ಯ ಹಾಗೂ ಈರಯ್ಯ ಹಿರೇಮಠ ಅವರಿಂದ ನಡೆಯಲಿವೆ.

ಶ್ರಾವಣ ತಪೋನುಷ್ಠಾನ : ಶ್ರೀ ಅಭಿನವ ಶಾಂತಲಿಂಗ ಶಿವಾಚಾರ್ಯ ಸ್ವಾಮಿಗಳ ಸಾಮೂಹಿಕ ಇಷ್ಟಲಿಂಗ ಮಹಾಪೂಜೆಯ ಶ್ರಾವಣ ತಪೋನುಷ್ಠಾನದಲ್ಲಿ ಹುಬ್ಬಳ್ಳಿ-ಧಾರವಾಡ ಅವಳಿ ನಗರಗಳೂ ಸೇರಿದಂತೆ ಅಮ್ಮಿನಬಾವಿ, ಮರೇವಾಡ, ತಿಮ್ಮಾಪೂರ, ಕರಡಿಗುಡ್ಡ, ಕವಲಗೇರಿ, ಚಂದನಮಟ್ಟಿ, ಹಾರೋಬೆಳವಡಿ ಸೇರಿದಂತೆ ಹತ್ತಿರದ ಗ್ರಾಮಗಳ ಶಿಷ್ಯ-ಸದ್ಭಕ್ತರು ನಿತ್ಯವೂ ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡು ಉಭಯ ಶ್ರೀಗಳ ದರ್ಶನಾಶೀರ್ವಾದ ಪಡೆದುಕೊಳ್ಳುವಂತೆ ಶ್ರೀಮಠದ ವ್ಯವಸ್ಥಾಪಕರು ಮನವಿ ಮಾಡಿದ್ದಾರೆ

