ಮಂಗಳೂರು: ಮಂಗಳೂರಿನ ಸಾಹಿತ್ಯ ಕೇಂದ್ರದ ವತಿಯಿಂದ ‘ಪುಸ್ತಕ ಹಬ್ಬ–2026’ ಅನ್ನು ಆಗಸ್ಟ್ 16 ರಿಂದ 18 ರವರೆಗೆ ಮೂರು ದಿನಗಳ ಕಾಲ ಸಂಘನಿಕೇತನ ಸಭಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ಆಯೋಜನಾ ಸಮಿತಿ ಸಂಚಾಲಕ ಲತೇಶ್ ಬಾಕ್ರಬೈಲ್ ತಿಳಿಸಿದ್ದಾರೆ.
ನಗರದ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪುಸ್ತಕ ಓದುವ ಸಂಸ್ಕೃತಿ ಬೆಳೆಸುವುದು ಹಾಗೂ ಯುವಜನರಲ್ಲಿ ಸಾಹಿತ್ಯಾಸಕ್ತಿ ಹೆಚ್ಚಿಸುವ ಉದ್ದೇಶದಿಂದ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.

ಆಗಸ್ಟ್ 16ರಂದು ಖ್ಯಾತ ಲೇಖಕ ಗಿರೀಶ್ ರಾವ್ ಹತ್ವಾರ್ (ಜೋಗಿ) ಕಾರ್ಯಕ್ರಮ ಉದ್ಘಾಟಿಸಲಿದ್ದು, ಡಾ.ಮೋಹನ್ ಆಳ್ವ ಅಧ್ಯಕ್ಷತೆ ವಹಿಸಲಿದ್ದಾರೆ. ಮೂರು ದಿನಗಳ ಕಾಲ ಕವಿಗೋಷ್ಠಿ, ಸಂಗೀತ, ಸಾಂಸ್ಕೃತಿಕ ಕಾರ್ಯಕ್ರಮ, ನಾಟಕ, ಯಕ್ಷಗಾನ ಹಾಗೂ ವಿಚಾರಗೋಷ್ಠಿಗಳು ನಡೆಯಲಿವೆ.
ಪುಸ್ತಕ ಹಬ್ಬದಲ್ಲಿ ಬೃಹತ್ ಪುಸ್ತಕ ಪ್ರದರ್ಶನ ಮತ್ತು ಮಾರಾಟದ ಜೊತೆಗೆ ಖ್ಯಾತ ಕವಿಗಳು ಹಾಗೂ ಬರಹಗಾರರನ್ನು ಭೇಟಿ ಮಾಡುವ ಅವಕಾಶವೂ ಇರಲಿದೆ. ಮಕ್ಕಳ ಪ್ರತಿಭಾ ಪ್ರದರ್ಶನಕ್ಕೂ ವೇದಿಕೆ ಕಲ್ಪಿಸಲಾಗಿದೆ. ಪ್ರತಿದಿನ ಸುಮಾರು 2,500 ವಿದ್ಯಾರ್ಥಿಗಳು ಭಾಗವಹಿಸುವ ನಿರೀಕ್ಷೆಯಿದೆ.
ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ಪ್ರಮುಖರಾಯದ ಪ್ರಕಾಶ್ ಪೈ, ಅರವಿಂದ್, ಗಜಾನನ ಪೈ, ಕೆ.ರತ್ನಾಕರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

