ಮಂಗಳೂರು: ಬಿಎಸ್ಎನ್ಎಲ್ ಪರಿಚಯಿಸಿರುವ ಸ್ಯಾಟಲೈಟ್ ಫೋನ್ ಸೇವೆಗೆ ಮಂಗಳೂರಿನಲ್ಲಿ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ ಎಂದು ಮಂಗಳೂರು ವಿಭಾಗದ ಮಹಾ ಪ್ರಬಂಧಕ ಹೇಮಂತ್ ಸದಾಶಿವ ಬೊರಲೆ ತಿಳಿಸಿದ್ದಾರೆ.
ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೊಬೈಲ್ ಜಾಲ ಲಭ್ಯವಿಲ್ಲದ ದುರ್ಗಮ ಪ್ರದೇಶಗಳು, ವಿಪತ್ತು ನಿರ್ವಹಣೆ ಹಾಗೂ ತುರ್ತು ಸಂದರ್ಭಗಳಲ್ಲಿ ಸ್ಯಾಟಲೈಟ್ ಫೋನ್ ಸೇವೆ ಉಪಯುಕ್ತವಾಗಲಿದೆ. ಮೀನುಗಾರರಿಗೆ ಇದರ ಪ್ರಯೋಜನ ಹೆಚ್ಚಿದ್ದು, 20ಕ್ಕೂ ಅಧಿಕ ಮಂದಿ ಸಂಪರ್ಕಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ ಎಂದರು.

ಭಾರತ್ನೆಟ್ ಯೋಜನೆಯಡಿ ಗ್ರಾಮೀಣ ಪ್ರದೇಶಗಳಲ್ಲಿ 88 ಒಎಲ್ಟಿ ಸ್ಥಾಪಿಸಿ 5,000ಕ್ಕೂ ಅಧಿಕ ಎಫ್ಟಿಟಿಎಚ್ ಸಂಪರ್ಕಗಳನ್ನು ಒದಗಿಸಲಾಗಿದೆ. ಸುಳ್ಯ, ಕಡಬ ಸೇರಿದಂತೆ ಗ್ರಾಮೀಣ ಭಾಗಗಳಿಗೆ ಬ್ರಾಡ್ಬ್ಯಾಂಡ್ ಸೇವೆ ವಿಸ್ತರಿಸಲಾಗಿದೆ. 4ಜಿ ಜಾಲ ವಿಸ್ತರಣೆಗೆ ಆದ್ಯತೆ ನೀಡಲಾಗುತ್ತಿದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಬಿಎಸ್ಎನ್ಎಲ್ ಮಂಗಳೂರು ವಿಭಾಗದ ಪ್ರಮುಖ ಅಧಿಕಾರಿಗಳಾದ ಕೃಷ್ಣ ಮೊಗೇರ, ವಿಜಿ ವಿ., ಮಮತಾ ಮತ್ತಿತರರು ಉಪಸ್ಥಿತರಿದ್ದರು.

