ಬೆಳ್ತಂಗಡಿ : ಅಜ್ಜಿಯ ಚಿನ್ನವನ್ನೇ ಸುಲಿಗೆ ಮಾಡಿದ ಆರೋಪದಡಿಯಲ್ಲಿ ಮೊಮ್ಮಗನನ್ನು ಬಂಧಿಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುಂಜಾಲಕಟ್ಟೆ ಪೊಲೀಸ್ ಠಾಣಾ ವ್ಯಾಪ್ತಿಯ ಬಂಟ್ವಾಳ ತೆಂಕಕಜೆಕಾರು ಉದ್ದದ ಗುಡ್ಡೆ ಎಂಬಲ್ಲಿ ನಡೆದಿದೆ.
ಪ್ರಕರಣದ ದೂರುದಾರರಾದ ಸಾದಿಕ್ ಎಂಬವರ ತಾಯಿ ಅವ್ವಮ್ಮ (82) ಎಂಬವರು ಮೊನ್ನೆ ಮನೆಯಲ್ಲಿ ಒಬ್ಬಂಟಿಯಾಗಿದ್ದಾಗ ಯಾರೋ ಅಪರಿಚಿತ ವ್ಯಕ್ತಿ ಮುಖಚಹರೆ ಕಾಣದಂತೆ ಮುಖಕ್ಕೆ ಬಟ್ಟೆ ಸುತ್ತಿಕೊಂಡು ಮನೆಯೊಳಗೆ ಬಂದು ಮಹಿಳೆಯ ಎರಡು ಕೈಯಲ್ಲಿದ್ದ ಸುಮಾರು 5,00,000 ಮೌಲ್ಯದ ಸುಮಾರು 40 ಗ್ರಾಂ ತೂಕದ ಎರಡು ಚಿನ್ನದ ಬಳೆಗಳನ್ನು ಬಲತ್ಕಾರವಾಗಿ ಎಳೆದುಕೊಂಡು ಹೋಗಿದ್ದು, ಇದೇ ವೇಳೆ ಮಹಿಳೆಯ ಕೈಗೆ ಗಾಯವಾಗಿರುವ ಬಗ್ಗೆ ಸಾದಿಕ್ ಎಂಬವರು ನೀಡಿದ ದೂರಿನಂತೆ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಠಾಣಾ ಅ.ಕ್ರ: 70/2026, ಕಲಂ: 309(6) BNS- 2023 ರಂತೆ ಪ್ರಕರಣ ದಾಖಲಾಗಿತ್ತು.
ಈ ಪ್ರಕರಣದ ತನಿಖೆ ನಡೆಸಿದಾಗ ಈ ಪ್ರಕರಣದ ಆಪಾದಿತನಾದ ಹಾಗೂ ಸದ್ರಿ ಅವ್ವಮ್ಮರ ಮೊಮ್ಮಗನಾದ ಬಂಟ್ವಾಳ ತೆಂಕಕಜೆಕಾರು ನಿವಾಸಿ ಶಬೀರ್ (33) ಎಂಬಾತನನ್ನು ಬಂಧಿಸಿ ಆತನಿಂದ ಎರಡು ಚಿನ್ನದ ಬಳೆಗಳನ್ನು ಸ್ವಾಧೀನಪಡಿಸಿಕೊಂಡಿದ್ದು, ಆಪಾದಿತನನ್ನು ವಿಚಾರಣೆ ನಡೆಸಿ ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಈ ಪ್ರಕರಣವನ್ನು ಪತ್ತೆ ಕಾರ್ಯದಲ್ಲಿ ಬೆಳ್ತಂಗಡಿ ಪೊಲೀಸ್ ಉಪಾಧೀಕ್ಷಕರಾದ ರೋಹಿಣಿ ಸಿ.ಕೆ ರವರ ನೇತೃತ್ವದಲ್ಲಿ ಬೆಳ್ತಂಗಡಿ ಗ್ರಾಮಾಂತರ ಸಿ.ಪಿ.ಐ ರವಿ ಬಿ.ಎಸ್, ಪುಂಜಾಲಕಟ್ಟೆ ಠಾಣಾ ಪಿ.ಎಸ್.ಐ ರಾಜೇಶ್ ಕೆ.ವಿ, ಸಿಬ್ಬಂದಿಗಳಾದ ಎ ಎಸ್ ಐ ಬೆನ್ನಿಚ್ಚನ್, ಪ್ರವೀಣ್ ಮೂರುಗೋಳಿ, ರಾಜೇಶ್, ವಿಜಯ್ ಕುಮಾರ್, ರಾಹುಲ್ ರಾವ್, ನಾಗರಾಜ್, ರಜಿತ್, ಬಸವರಾಜ್, ಸತೀಶ್ ರವರು, ಜಿಲ್ಲಾ ತಾಂತ್ರಿಕ ವಿಭಾಗದ ದಿವಾಕರ್ ಮತ್ತು ಸಂಪತ್ ರವರು ಕರ್ತವ್ಯ ನಿರ್ವಹಿಸಿರುತ್ತಾರೆ.

