ಮಂಗಳೂರು: ಆಕಾಶವಾಣಿಯ ಟಾಪ್ ಗ್ರೇಡ್ ಕಲಾವಿದೆ ಹಾಗೂ ಚಲನಚಿತ್ರ ಹಿನ್ನೆಲೆ ಗಾಯಕಿ ಸಂಗೀತ ಬಾಲಚಂದ್ರ ಅವರು 25 ವರ್ಷಗಳ ಸಂಗೀತ ಪಯಣದ ಅಂಗವಾಗಿ 25 ಗಂಟೆಗಳ ನಿರಂತರ ದಾಸರಪದ ಗಾಯನದ ಮೂಲಕ ವಿಶ್ವ ದಾಖಲೆ ನಿರ್ಮಿಸುವ ಪ್ರಯತ್ನಕ್ಕೆ ಮುಂದಾಗಿದ್ದಾರೆ.

ಉಡುಪಿಯ ಶ್ರೀ ಕೃಷ್ಣ ಮಠದ ಸಮೀಪದ ಗೀತಾ ಮಂದಿರದ ಶ್ರೀ ಪುತ್ತಿಗೆ ನೃಸಿಂಹ ಸಭಾಂಗಣದಲ್ಲಿ ಆಗಸ್ಟ್ 23ರಂದು ಬೆಳಗ್ಗೆ 6.30ಕ್ಕೆ ಆರಂಭವಾಗುವ ಗಾಯನ ಆಗಸ್ಟ್ 24ರಂದು ಬೆಳಗ್ಗೆ 7.30ಕ್ಕೆ ಮುಕ್ತಾಯಗೊಳ್ಳಲಿದೆ. ‘ಪಂಚವಿಂಶತಿ’ ಹೆಸರಿನ ಈ ಕಾರ್ಯಕ್ರಮಕ್ಕೆ ಭೀಮಾ ಜ್ಯುವೆಲ್ಲರ್ಸ್ ಪ್ರಾಯೋಜಕತ್ವವಿದ್ದು, ‘ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್’ ದಾಖಲೆಯ ಗುರಿ ಹೊಂದಲಾಗಿದೆ.

250 ದಾಸರಪದಗಳಿಗೆ ಹೊಸದಾಗಿ ಸ್ವರ ಸಂಯೋಜನೆ ಮಾಡಲಾಗಿದ್ದು, ಎರಡು ತಂಡಗಳಿಂದ ಲೈವ್ ಸಂಗೀತ ಸಾಥ್ ಇರಲಿದೆ. ಈ ಪ್ರಯತ್ನ ತಮ್ಮ ಸಂಗೀತ ಪಯಣದ ಮಹತ್ವದ ಮೈಲಿಗಲ್ಲಾಗಲಿದೆ ಎಂದು ಸಂಗೀತ ಬಾಲಚಂದ್ರ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಹಿರಿಯ ರಂಗಭೂಮಿ ಕಲಾವಿದ ವಿಜಯ್ ಕುಮಾರ್ ಕೊಡಿಯಾಲ್ಬೈಲ್, ಸಂಗೀತ ಕಲಾವಿದರಾದ ವೀಕ್ಷಿತ್, ಗುರುರಾಜ್ ಹಾಗೂ ಎ.ಕೆ. ವಿಜಯ್ ಕೋಕಿಲ ಉಪಸ್ಥಿತರಿದ್ದರು.

