ಮಂಗಳೂರು : ಲೋಕಕಲ್ಯಾಣ, ಶಾಂತಿ, ಸಮೃದ್ಧಿ ಹಾಗೂ ಸರ್ವಜನ ಕ್ಷೇಮದ ಸಂಕಲ್ಪದೊಂದಿಗೆ ಜಗದಾಚಾರ್ಯ ಸ್ವಾಮಿ ಅಖಿಲೇಶ್ಜೀ ಮಹಾರಾಜ್ ಸೇವಾ ಸಂಸ್ಥಾನ ಹಾಗೂ ದಿ ಸ್ಯಾಫ್ರನ್ ಫ್ರಂಟ್ ಸಹಯೋಗದಲ್ಲಿ ಶ್ರೀಮದ್ ಲಕ್ಷ್ಮೀನಾರಾಯಣ ಮಹಾಯಾಗ ಆಯೋಜಿಸಲಾಗಿದೆ.
ಆಗಸ್ಟ್ 24ರಿಂದ 28ರವರೆಗೆ ಶ್ರೀ ಯೋಗೇಶ್ವರ ಕದ್ರಿ ಮಠದಲ್ಲಿ ಮಹಾಯಾಗ ನಡೆಯಲಿದ್ದು, ದಕ್ಷಿಣ ಕನ್ನಡದಲ್ಲಿ ಇದೇ ಮೊದಲ ಬಾರಿಗೆ ಆಯೋಜಿಸಲಾಗುತ್ತಿದೆ ಎಂದು ಕಾರ್ಯಾಧ್ಯಕ್ಷ ದಿನಕರ ಶೆಟ್ಟಿ ತಿಳಿಸಿದರು.
ಆಚಾರ್ಯ ಶ್ರೀ ಲವಕುಶ್ ಮಿಶ್ರಾಜೀ ಅವರ ಪೌರೋಹಿತ್ಯದಲ್ಲಿ ವಿವಿಧ ವೈದಿಕ ವಿಧಿವಿಧಾನಗಳು ನಡೆಯಲಿವೆ. ಜಾತಿ-ಭೇದವಿಲ್ಲದೆ ಎಲ್ಲ ವರ್ಗದ ಜನರು ಭಾಗವಹಿಸುವ ಮೂಲಕ ಕುಟುಂಬ ಹಾಗೂ ಸಮಾಜದಲ್ಲಿ ಶಾಂತಿ, ಸೌಹಾರ್ದ ಮತ್ತು ಸಮೃದ್ಧಿ ನೆಲೆಸುವುದು ಮಹಾಯಾಗದ ಉದ್ದೇಶವಾಗಿದೆ ಎಂದರು.

ಆಗಸ್ಟ್ 24ರಂದು ಬೆಳಗ್ಗೆ 8 ಗಂಟೆಗೆ ಕದ್ರಿ ಶ್ರೀ ಮಂಜುನಾಥೇಶ್ವರ ದೇವಸ್ಥಾನದಿಂದ ಶ್ರೀ ಯೋಗೇಶ್ವರ ಕದ್ರಿ ಮಠದವರೆಗೆ ಕಳಶಯಾತ್ರೆ ನಡೆಯಲಿದೆ. ಐದು ದಿನಗಳ ಕಾಲ ಹೋಮ-ಹವನ, ಮಂತ್ರಪಠಣ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದ್ದು, **ಆಗಸ್ಟ್ 28ರಂದು ಪೂರ್ಣಾಹುತಿ ನೆರವೇರಲಿದೆ ಎಂದರು .
ಪತ್ರಿಕಾಗೋಷ್ಠಿಯಲ್ಲಿ ಆಯೋಜನ ಸಮಿತಿಯ ಪ್ರಮುಖರಾದ ಕಿರಣ್ ಕುಮಾರ್ ಜೋಗಿ, ರಾಘವೇಂದ್ರ ರಾವ್, ರಾಜೇಶ್ ಪವಿತ್ರನ್, ಎಲ್.ಕೆ. ಸುವರ್ಣ, ಜನಾರ್ಧನ ಹಾಗೂ ಕಮಲೇಶ ಸುವರ್ಣ ಉಪಸ್ಥಿತರಿದ್ದರು.

