ಧಾರವಾಡ : ಗ್ರಂಥಾಲಯ ಹಾಗೂ ಮಾಹಿತಿ ವಿಜ್ಞಾನದಲ್ಲಿ ತಮ್ಮದೇ ಆದ ವಿಶಿಷ್ಟ ಪಾಂಡಿತ್ಯವನ್ನು ಹೊಂದಿರುವ ನಗರದ ಜಯದೇವ ಪಂಚಾಕ್ಷರಿ ಹಿರೇಮಠ ಅವರಿಗೆ ಅವರ ಜೀವಮಾನ ಸಾಧನೆಯನ್ನು ಪರಿಗಣಿಸಿ ಫ್ರಾನ್ಸ್ನ ಥೇಮ್ಸ್ ಅಂತಾರಾಷ್ಟಿಯ ವಿಶ್ವವಿದ್ಯಾಲಯವು ವೃತ್ತಿಪರ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ. ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ಕ್ಷೇತ್ರದಲ್ಲಿನ ಅಚಲವಾದ ಬದ್ಧತೆ, ಅಪಾರ ಅನುಭವ, ಗಮನಾರ್ಹ ಸಾಧನೆಗಳು ಹಾಗೂ ನವೀನ ಮತ್ತು ಅಮೂಲ್ಯವಾದ ಕೊಡುಗೆಗಾಗಿ ಜಯದೇವ್ ಅವರನ್ನು ಈ ಪದವಿಗೆ ಆಯ್ಕೆ ಮಾಡಲಾಗಿದೆ.

ಜಯದೇವ ಅವರು ಭಾರತ, ಕುವೈತ್ ಹಾಗೂ ದುಬೈ ರಾಷ್ಟçಗಳಲ್ಲಿಯ ಗ್ರಂಥಾಲಯ ವ್ಯವಸ್ಥೆ, ಜೊತೆಗೆ ಅದನ್ನು ವಿದ್ಯಾರ್ಥಿಗಳ ಅಧ್ಯಯನಕ್ಕೆ ಬಳಕೆ ಮಾಡಿಕೊಳ್ಳುವ ಕುರಿತು ಅಪಾರ ಅನುಭವವನ್ನು ಹೊಂದಿದ್ದು, ಈ ಹಿಂದೆ ಕರ್ನಾಟಕ ಕಾನೂನು ವಿ.ವಿ. ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾ, ಭೂಪಾಲದ ದಿ. ಬ್ರಿಟಿಷ್ ಕೌನ್ಸಿಲ್ ಗ್ರಂಥಾಲಯ, ಮುಂಬೈನ ಯುನಿಟ್ ಟ್ರಸ್ಟ್ ಆಫ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಕ್ಯಾಪಿಟಲ್ ಮಾರ್ಕೆಟ್, ನವದೆಹಲಿಯ ನ್ಯಾಷನಲ್ ಕೌನ್ಸಿಲ್ ಫಾರ್ ಸಿಮೆಂಟ್ ಹಾಗೂ ಸಾಮಗ್ರಿ ಸಂಸ್ಥೆಗಳಲ್ಲಿಯೂ ಹಿರೇಮಠ ಗ್ರಂಥಪಾಲಕರಾಗಿ ವಿಶಿಷ್ಟ ಸೇವೆ ಸಲ್ಲಿಸಿದ್ದಾರೆ. ಕುವೈತ್ನ ಕೇಂದ್ರೀಯ ಬ್ಯಾಂಕಿಂಗ್ ಅಧ್ಯಯನ ಸಂಸ್ಥೆ, ಅಮೇರಿಕನ್ ಯುನಿರ್ವಸಿಟಿ ಆಫ್ ಕುವೈತ್ ಹಾಗೂ ಇಂಡಸ್ಟಿçಯಲ್ ಬ್ಯಾಂಕ್, ದುಬೈನ ಬಿ.ಐ.ಟಿ.ಎಸ್. ಪಿಲನಿ ವಿ.ವಿ. ಗ್ರಂಥಾಲಯಗಳನ್ನು ಹೊಸ ವಿನ್ಯಾಸ ಮತ್ತು ಮಾಹಿತಿ ವಿಜ್ಞಾನದೊಂದಿಗೆ ಆಧುನೀಕರಣಗೊಳಿಸುವಲ್ಲಿ ಜಯದೇವ ಅವರು ಪ್ರಮುಖ ಪಾತ್ರವಹಿಸಿದ್ದಾರೆ.


