ಮಂಗಳೂರು : ದಿನಾಂಕ 17 ರಂದು ಗಾಂಜಾ ಸೇವನೆ ಮಾಡಿದ ಪ್ರಕರಣದಲ್ಲಿ ಬಂಧಿತನಾಗಿದ್ದ ಆಶ್ವಿನ್ ಕ್ಸೇವಿಯರ್ (24) ಎಂಬಾತನನ್ನು ವಿಚಾರಣೆಗೊಳಪಡಿಸಿದಾಗ ಕಾಲೇಜು ವಿದ್ಯಾರ್ಥಿಗಳಿಗೆ ಗಾಂಜಾ ಸರಬರಾಜು ಮಾಡುತ್ತಿದ್ದ ನಿತಿನ್ ಕೃಷ್ಣನ್ ಎಂಬಾತನನ್ನು ತೋರಿಸಿ ಕೊಡುವುದಾಗಿ ತಿಳಿಸಿರುತ್ತಾನೆ.
ಈ ಹಿನ್ನೆಲೆಯಲ್ಲಿ ದಿನಾಂಕ 18 ರಂದು ಕದ್ರಿ ಗ್ರಾಮದ ಪದವು ಮೈದಾನದ ಬಳಿಯಿರುವ ಆಯುರ್ವೇದ ಕ್ಲಿನಿಕ್ ನಲ್ಲಿ ಥೆರಪಿಸ್ಟ್ ಆಗಿ ಕೆಲಸ ಮಾಡುತ್ತಿದ್ದ ಕೇರಳದ ಕಣ್ಣೂರು ನಿವಾಸಿಯಾದ ಹಾಲಿ ಮಂಗಳೂರಿನ ಕೊಂಚಾಡಿಯ ಶಬರಿ ಅಪಾರ್ಟ್ಮೆಂಟ್ ನಲ್ಲಿ ವಾಸವಿರುವ ಆರೋಪಿ ನಿತಿನ್ ಕೃಷ್ಣನ್ (27) ಎಂಬಾತನನ್ನು ಪತ್ತೆಹಚ್ಚಿ, ಆತನ ವಶದಲ್ಲಿದ್ದ 60,000 ರೂ,ಮೌಲ್ಯದ 1 ಕೆ.ಜಿ. 206 ಗ್ರಾಂ ತೂಕದ ಗಾಂಜಾ, ಕೃತ್ಯಕ್ಕೆ ಬಳಸಿದ ಮೊಬೈಲ್ ಫೋನ್ ಹಾಗೂ ಕೆಎಲ್-86-2397 ನೋಂದಣಿ ಸಂಖ್ಯೆಯ KTM ಮೋಟಾರ್ ಸೈಕಲ್ ಅನ್ನು ಮತ್ತು ಆರೋಪಿಯ ಮೊಬೈಲ್ ಫೋನನ್ನು ಸ್ವಾಧೀನ ಪಡಿಸಿಕೊಳ್ಳಲಾಗಿದೆ.
ಈ ಕುರಿತು ಸುರತ್ಕಲ್ ಪೊಲೀಸ್ ಠಾಣೆಯ ಮೊ.ನಂ. 104/2026, ಕಲಂ 8(c), 20(b)(ii)(B), 27(b) ಎನ್.ಡಿ.ಪಿ.ಎಸ್. ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆರೋಪಿಯನ್ನು ಮಾನ್ಯ ನ್ಯಾಯಾಲಯದ ಮುಂದೆ ಹಾಜರು ಪಡಿಸಲಾಗಿದ್ದು, ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

