ಮಂಗಳೂರು : ವಿಶ್ವ ಕೊಂಕಣಿ ಕೇಂದ್ರ, ಶಕ್ತಿನಗರ, ಮಂಗಳೂರು ಇವರ ವತಿಯಿಂದ ಕೊಂಕಣಿ ಮಾನ್ಯತಾ ದಿನದ ಅಂಗವಾಗಿ ಆಗಸ್ಟ್ 20, 2026ರಂದು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಕೆನರಾ ಶಾಲೆ, ಡೊಂಗರಕೇರಿಯ ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿ, ಕೊಂಕಣಿ ವಿನೋದಾವಳಿ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದು ಶಾಲೆಗೆ ಕೀರ್ತಿ ತಂದರು.
ನಮ್ಮ ವಿದ್ಯಾರ್ಥಿಗಳು ಶ್ರಾವಣ ಮಾಸದ ವಿವಿಧ ಹಬ್ಬಗಳ ವೈಶಿಷ್ಟ್ಯ ಹಾಗೂ ಸಂಭ್ರಮವನ್ನು ಬಿಂಬಿಸುವ ಸಾಂಸ್ಕೃತಿಕ ಕಾರ್ಯಕ್ರಮವನ್ನು ಅತ್ಯಂತ ಸುಂದರವಾಗಿ ಪ್ರಸ್ತುತಪಡಿಸಿದರು. ವಿದ್ಯಾರ್ಥಿಗಳ ಮನೋಜ್ಞ ಪ್ರದರ್ಶನವು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿ, ಅವರಿಗೆ ಪ್ರಥಮ ಬಹುಮಾನ ಹಾಗೂ ₹5,000 ನಗದು ಬಹುಮಾನ ಲಭಿಸಿತು.
ವಿಶ್ವ ಕೊಂಕಣಿ ಕೇಂದ್ರದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾದ ಶ್ರೀ ಅನಂತ್ ಅಗ್ನಿ, ಗೋವಾ ಅವರು ರಾಷ್ಟ್ರಧ್ವಜವನ್ನು ಹಾರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ದೀಪ ಪ್ರಜ್ವಲಿಸುವ ಮೂಲಕ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಯಿತು.
ಈ ಅದ್ಭುತ ಸಾಧನೆಗಾಗಿ ನಮ್ಮ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಹಾಗೂ ಅವರನ್ನು ಸಿದ್ಧಪಡಿಸಿದ ಶ್ರೀಮತಿ ನಮಿತಾ ಶೆಣೈ, ಶ್ರೀಮತಿ ಅಕ್ಷತಾ, ಶ್ರೀಮತಿ ಶ್ವೇತಾ ಪ್ರಭು ಮತ್ತು ಶ್ರೀಮತಿ ಅಕ್ಷಯಾ ಕಾಮತ್ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು.
ಕೊಂಕಣಿ ಭಾಷೆ, ಸಂಸ್ಕೃತಿ ಮತ್ತು ಪರಂಪರೆಯನ್ನು ಪರಿಚಯಿಸುವ ಇಂತಹ ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರಥಮ ಬಹುಮಾನ ಗಳಿಸಿರುವುದು ಕೆನರಾ ಶಾಲೆಯ ವಿದ್ಯಾರ್ಥಿಗಳಿಗೆ ಹೆಮ್ಮೆಯ ಕ್ಷಣವಾಗಿದೆ. ವಿದ್ಯಾರ್ಥಿಗಳ ಈ ಸಾಧನೆಗೆ ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀಮತಿ ಕವಿತಾ ಮೌರ್ಯಾ, ಶಿಕ್ಷಕ ವೃಂದ ಹಾಗೂ ಪೋಷಕರು ಅಭಿನಂದನೆ ಸಲ್ಲಿಸಿದ್ದಾರೆ.

