ಕಲಬುರಗಿ : ಸಾರ್ವಜನಿಕವಾಗಿ ಬಿಜೆಪಿ ಕಾರ್ಯಕರ್ತರು ಹಾಗೂ ಮುಖಂಡರ ವಿರುದ್ಧ ದ್ವೇಷಪೂರಿತ ಹೇಳಿಕೆ ನೀಡಿ, ಬೆದರಿಕೆ ಹಾಕುವ ರೀತಿಯಲ್ಲಿ ಭಾಷಣ ಮಾಡಿ ಸಮಾಜದಲ್ಲಿ ಶಾಂತಿ-ಸುವ್ಯವಸ್ಥೆಗೆ ಧಕ್ಕೆ ತಂದ ಆರೋಪದಡಿ ಎಸ್ಡಿಪಿಐ ಮುಖಂಡ ಸೈಯದ್ ಅಲೀಮ್ ಇಲಾಹಿ ವಿರುದ್ಧ ಕಲಬುರಗಿ ನಗರದ ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಜುಲೈ 25ರಂದು ಕಲಬುರಗಿ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಯಂಗ್ ಡೆಮಾಕ್ರಾಟ್ಸ್ ಸಂಘಟನೆ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಸೈಯದ್ ಅಲೀಮ್ ಇಲಾಹಿ ಸಾರ್ವಜನಿಕವಾಗಿ ಭಾಷಣ ಮಾಡಿದ್ದರು. ಈ ವೇಳೆ ಬಿಜೆಪಿ ಹಾಗೂ ಬಿಜೆಪಿ ಮುಖಂಡ, ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ನೀಡಿ, ಅವಾಚ್ಯ ಪದಗಳನ್ನು ಬಳಸಿ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ.
ಈ ಸಂಬಂಧ ಬಿಜೆಪಿ ಮುಖಂಡ ಮಹೇಶ್ ಗೌಳಿ ಅವರು ಭಾಷಣದ ವಿಡಿಯೋ ದಾಖಲೆ ಸಹಿತ ಜುಲೈ 28ರಂದು ಸ್ಟೇಷನ್ ಬಜಾರ್ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದರು. ದ್ವೇಷಪೂರಿತ ಹೇಳಿಕೆಗಳ ಕುರಿತು ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಮನವಿ ಮಾಡಲಾಗಿತ್ತು.
ಈ ಪ್ರಕರಣ ಅಪರಾಧಕ್ಕೆ ಸಂಬಂಧಿಸಿದ್ದರಿಂದ ಕಾನೂನು ಸಲಹೆ ಹಾಗೂ ಅಭಿಪ್ರಾಯ ಪಡೆದ ಬಳಿಕ ಪ್ರಕರಣ ದಾಖಲಿಸಲಾಗಿದೆ ಎಂದು ಸ್ಟೇಷನ್ ಬಜಾರ್ ಪೊಲೀಸರು ತಿಳಿಸಿದ್ದಾರೆ.
ದೂರು ಸಲ್ಲಿಸಿದ ಸುಮಾರು 22 ದಿನಗಳ ಬಳಿಕ, ಆಗಸ್ಟ್ 20ರಂದು ಸೈಯದ್ ಅಲೀಮ್ ಇಲಾಹಿ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

