ನವದೆಹಲಿ: ಆಗಸ್ಟ್ 28ರಂದು ಆಕಾಶದಲ್ಲಿ ಈ ವರ್ಷದ ಕೊನೆಯ ಚಂದ್ರಗ್ರಹಣ ಸಂಭವಿಸಲಿದ್ದು, ಈ ಬಾರಿ ರಕ್ಷಾ ಬಂಧನ ಹಬ್ಬದಂದೇ ಅಪರೂಪದ ಖಗೋಳ ವಿದ್ಯಮಾನಕ್ಕೆ ಸಾಕ್ಷಿಯಾಗುವ ಅವಕಾಶ ದೊರೆಯಲಿದೆ.
ಇದು ಸಂಪೂರ್ಣ ಚಂದ್ರಗ್ರಹಣವಾಗಿರದಿದ್ದರೂ, ಭೂಮಿಯ ನೆರಳು ಚಂದ್ರನ ಸುಮಾರು ಶೇ.96ರಷ್ಟು ಭಾಗವನ್ನು ಆವರಿಸುವ ಅತ್ಯಂತ ಆಳವಾದ ಭಾಗಶಃ ಚಂದ್ರಗ್ರಹಣ ವಾಗಿರಲಿದೆ. ಗ್ರಹಣದ ವೇಳೆ ಭೂಮಿಯ ವಾತಾವರಣದ ಮೂಲಕ ಹಾದು ಬರುವ ಸೂರ್ಯನ ಬೆಳಕು ವಕ್ರೀಭವನಗೊಳ್ಳುವುದರಿಂದ ಚಂದ್ರನು ತಾಮ್ರ ಅಥವಾ ಕೆಂಪು ಬಣ್ಣದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯಿದ್ದು, ಈ ದೃಶ್ಯವನ್ನು ಸಾಮಾನ್ಯವಾಗಿ ‘ಬ್ಲಡ್ ಮೂನ್’ (ರಕ್ತ ಚಂದ್ರ) ಎಂದು ಕರೆಯಲಾಗುತ್ತದೆ.
ಈ ಖಗೋಳ ವಿದ್ಯಮಾನವು ಉತ್ತರ ಅಮೆರಿಕ, ದಕ್ಷಿಣ ಅಮೆರಿಕ ಹಾಗೂ ಯುರೋಪ್ ಮತ್ತು ಆಫ್ರಿಕಾದ ಕೆಲವು ಭಾಗಗಳಲ್ಲಿ ಸ್ಪಷ್ಟವಾಗಿ ಗೋಚರಿಸಲಿದೆ. ಆದರೆ ಭಾರತ, ಆಸ್ಟ್ರೇಲಿಯಾ, ಚೀನಾ ಮತ್ತು ಜಪಾನ್ನಲ್ಲಿ ಈ ಚಂದ್ರಗ್ರಹಣ ಗೋಚರಿಸುವುದಿಲ್ಲ.
ಹಿಂದೂ ಜ್ಯೋತಿಷ್ಯ ನಂಬಿಕೆಗಳ ಪ್ರಕಾರ, ಚಂದ್ರನು ಮನಸ್ಸು, ಭಾವನೆ ಮತ್ತು ಶಾಂತಿಯ ಸಂಕೇತವಾಗಿದ್ದು, ಗ್ರಹಣದ ಸಂದರ್ಭದಲ್ಲಿ ಶಿವ, ವಿಷ್ಣು ಅಥವಾ ಮಹಾಮೃತ್ಯುಂಜಯ ಮಂತ್ರಗಳನ್ನು ಪಠಿಸುವುದು ಶುಭಕರ ಎಂದು ಪರಿಗಣಿಸಲಾಗುತ್ತದೆ.
ಭಾರತದಲ್ಲಿ ಚಂದ್ರಗ್ರಹಣ ಗೋಚರಿಸದ ಕಾರಣ, ಧಾರ್ಮಿಕ ನಂಬಿಕೆಗಳ ಪ್ರಕಾರ ಸೂತಕ ಸೇರಿದಂತೆ ಗ್ರಹಣಕ್ಕೆ ಸಂಬಂಧಿಸಿದ ಆಚರಣೆಗಳು ಅನ್ವಯಿಸುವುದಿಲ್ಲ. ಹೀಗಾಗಿ ರಕ್ಷಾ ಬಂಧನದ ಹಬ್ಬವನ್ನು ಎಂದಿನಂತೆ ಯಾವುದೇ ಗೊಂದಲವಿಲ್ಲದೆ ಆಚರಿಸಬಹುದು.

