ಬೆಂಗಳೂರು: ನಿರಂತರ ಕಿರುಕುಳ ಹಾಗೂ ಬ್ಲ್ಯಾಕ್ಮೇಲ್ನಿಂದ ಮಾನಸಿಕವಾಗಿ ನೊಂದಿದ್ದರೆನ್ನಲಾದ 22 ವರ್ಷದ ಯುವತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ಹೆಚ್ಎಸ್ಆರ್ ಲೇಔಟ್ನಲ್ಲಿ ನಡೆದಿದೆ. ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಬೆಳಮಕ್ಕಿ ಗ್ರಾಮದ ವಾಣಿಶ್ರೀ ಮೃತ ಯುವತಿ ಎಂದು ಗುರುತಿಸಲಾಗಿದೆ.
ಬೆಂಗಳೂರಿನಲ್ಲಿ ಪಿಜಿಯಲ್ಲಿ ವಾಸವಿದ್ದ ವಾಣಿಶ್ರೀ, ಚಿನ್ನದ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ಕಾಲೇಜು ದಿನಗಳಿಂದ ಪರಿಚಯವಿದ್ದ ಅಭಿಷೇಕ್ ಎಂಬಾತ ನಿರಂತರವಾಗಿ ಕಿರುಕುಳ ನೀಡುತ್ತಿದ್ದ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಆತ್ಮಹತ್ಯೆಗೂ ಮುನ್ನ ವಾಣಿಶ್ರೀ ಡೆತ್ನೋಟ್ ಬರೆದಿಟ್ಟಿದ್ದರು ಎನ್ನಲಾಗಿದ್ದು, ಅದರಲ್ಲಿ ಅಭಿಷೇಕ್ ತನ್ನನ್ನು ವಾಟ್ಸ್ಆ್ಯಪ್ ಮೂಲಕ ಫೋಟೋ, ವಿಡಿಯೋ ಕಳುಹಿಸಿ ಬ್ಲ್ಯಾಕ್ಮೇಲ್ ಮಾಡುತ್ತಿದ್ದ ಹಾಗೂ ತನ್ನ ಇಚ್ಛೆಯಂತೆ ವರ್ತಿಸುವಂತೆ ಒತ್ತಡ ಹೇರುತ್ತಿದ್ದ ಬಗ್ಗೆ ಉಲ್ಲೇಖಿಸಿದ್ದಾಳೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಕಿರುಕುಳದಿಂದ ತಾನು ಮಾನಸಿಕವಾಗಿ ನೊಂದಿರುವುದಾಗಿ ವಾಣಿಶ್ರೀ ಡೆತ್ನೋಟ್ನಲ್ಲಿ ಬರೆದಿದ್ದಾಳೆ ಎನ್ನಲಾಗಿದ್ದು, ಆರೋಪಿಯ ವಿರುದ್ಧ ಕಾನೂನು ಕ್ರಮ ಕೈಗೊಂಡು ಶಿಕ್ಷೆ ನೀಡುವಂತೆ ಮನವಿ ಮಾಡಿದ್ದಾಳೆ ಎಂದು ತಿಳಿದುಬಂದಿದೆ.
ಘಟನೆ ನಡೆದ ದಿನ ಬೆಳಗ್ಗೆ ಪಿಜಿಯಿಂದ ಹೊರಟಿದ್ದ ವಾಣಿಶ್ರೀ ವಾಪಸ್ ಬಾರದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಆತಂಕಗೊಂಡಿದ್ದರು. ಅವರ ಅಕ್ಕ ಪೂಜಾ ಅವರು ಹೆಚ್ಎಸ್ಆರ್ ಲೇಔಟ್ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು.
ಪೊಲೀಸರು ಹುಡುಕಾಟ ನಡೆಸುತ್ತಿದ್ದ ವೇಳೆ ಸಂಜೆ ಅಗರ ಕೆರೆಯಲ್ಲಿ ವಾಣಿಶ್ರೀ ಅವರ ಮೃತದೇಹ ಪತ್ತೆಯಾಗಿದೆ. ಮೃತದೇಹವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.
ವಾಣಿಶ್ರೀ ಆತ್ಮಹತ್ಯೆಗೆ ಅಭಿಷೇಕ್ ನೀಡುತ್ತಿದ್ದ ಕಿರುಕುಳವೇ ಕಾರಣ ಎಂದು ಪೂಜಾ ಅವರು ಪೊಲೀಸರಿಗೆ ನೀಡಿದ ದೂರಿನಲ್ಲಿ ಆರೋಪಿಸಿದ್ದಾರೆ. ಈ ಸಂಬಂಧ ಹೆಚ್ಎಸ್ಆರ್ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಅಭಿಷೇಕ್ಗಾಗಿ ಪೊಲೀಸರು ಶೋಧ ನಡೆಸಿ ತನಿಖೆ ಮುಂದುವರಿಸಿದ್ದಾರೆ.

