ವಾರಾಣಸಿ (ಉತ್ತರಪ್ರದೇಶ) : ಪ್ರಕೃತಿ ಮನುಷ್ಯನಿಗೆ ಪರೋಪಕಾರದ ಸಂದೇಶವನ್ನು ನೀಡಿದ್ದು, ಅದನ್ನು ಸರಿಯಾಗಿ ಅರ್ಥಮಾಡಿಕೊಂಡು ಬದುಕು ರೂಢಿಸಿಕೊಳ್ಳುವುದರಿಂದ ಮನುಷ್ಯನ ಬದುಕು ಸಾರ್ಥಕವಾಗುತ್ತದೆ ಎಂದು ವೀರಶೈವ ಧರ್ಮದ ಪಂಚಪೀಠಗಳಲ್ಲಿ ಒಂದಾದ ಕಾಶಿ ಜ್ಞಾನ ಪೀಠದ ಹಿರಿಯ ಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ನುಡಿದರು.
ಅವರು ಉತ್ತರಪ್ರದೇಶದ ವಾರಾಣಸಿ ನಗರದ ಜ್ಞಾನಪೀಠದಲ್ಲಿ ವಿವಿಧ ರಾಜ್ಯಗಳ ಭಕ್ತಗಣ ಹಮ್ಮಿಕೊಂಡಿದ್ದ ತಮ್ಮ 80ನೆಯ ವರ್ಧಂತಿ ಮಹೋತ್ಸವದ ಸಂದರ್ಭದಲ್ಲಿ ಕಾಶಿ ವಿಶ್ವನಾಥ ದೇವಾಲಯದ ಭದ್ರತಾ ಮುಖ್ಯಸ್ಥ ಸಿ.ಆರ್.ಪಿ.ಎಫ್. ಕಮಾಂಡರ್ ರಾಜಶೇಖರ ಶಿವಲಿಂಗಯ್ಯ ಅವರಿಗೆ ‘ರಾಷ್ಟ್ರಧರ್ಮ ಸೇವಾ ಶಿರೋಮಣಿ’ ಪ್ರಶಸ್ತಿ ಪ್ರದಾನಮಾಡಿ ಆಶೀರ್ವಚನ ನೀಡಿದರು.
ಗಿಡಮರಗಳು ಹಣ್ಣು ಮತ್ತು ನೆರಳನ್ನು, ನದಿಗಳು ನೀರನ್ನು, ಮೇಘಗಳು ಮಳೆಯನ್ನು ಸುರಿಸುತ್ತವೆ. ಪಶುಗಳು ಕೂಡಾ ಮನುಷ್ಯನಿಗೆ ಉಪಕಾರಿಯಾಗಿ ಕೆಲಸ ಮಾಡುತ್ತವೆ. ಅಂತೆಯೇ ಮನುಷ್ಯ ಸ್ವಾರ್ಥವನ್ನು ಬಿಟ್ಟು ಪರೋಪಕಾರಿಯಾದರೆ ಲೋಕ ಕಲ್ಯಾಣದ ಜೊತೆಗೆ ಆತನ ಆತ್ಮಕಲ್ಯಾಣವೂ ಆಗುತ್ತದೆ. ಪ್ರತಿಯೊಬ್ಬರೂ ಪ್ರಕೃತಿಯ ಈ ಸಮಷ್ಟಿ ಆಶಯಗಳನ್ನು ಅರಿತು ಮುನ್ನಡೆದಾಗ ಮಾತ್ರ ಭಕ್ತಗಣವು ಆಚರಿಸುವ ವರ್ಧಂತಿ ಮಹೋತ್ಸವಕ್ಕೆ ಅರ್ಥ ಬರುತ್ತದೆ. ಜನ್ಮದಿನೋತ್ಸವದಂದು ಎಲ್ಲರೂ ಸಮಾಜಮುಖಿಯಾಗಿ ಕೆಲಸ ಮಾಡುವ ಸಂಕಲ್ಪ ಮಾಡಬೇಕೆಂದು ಸಲಹೆ ನೀಡಿದರು.
ಕಾಶಿ ಪೀಠದ ಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರ ಜನ್ಮದಿನೋತ್ಸವದ ಅಂಗವಾಗಿ ಪ್ರಾತಃಕಾಲ ಜಗದ್ಗುರು ವಿಶ್ವಾರಾಧ್ಯರಿಗೆ ಮಹಾರುದ್ರಾಭಿಷೇಕ, ಸಾಮೂಹಿಕ ಇಷ್ಟಲಿಂಗ ಪೂಜೆ ನಡೆಯಿತು. ಸಂಜೆ ವೀರಶೈವ ಪಂಚಸೂತ್ರೀಯ0 ಮಹಾಕಾವ್ಯ ಕುರಿತು ಪ್ರವಚನ ನಡೆಯಿತು. ಇದೇ ವೇಳೆ ಶ್ರಾವಣ ಮಾಸದ ನಿಮಿತ್ತ ವಿವಿಧ ಮಠಗಳ ಶ್ರೀದಿಗಂಬರ ಶಿವಾಚಾರ್ಯ ಸ್ವಾಮೀಜಿ, ಶ್ರೀಶಿವಲಿಂಗ ಶಿವಾಚಾರ್ಯ ಸ್ವಾಮೀಜಿ ಹಾಗೂ ಶ್ರೀಮಹಾದೇವ ಶಿವಾಚಾರ್ಯ ಸ್ವಾಮೀಜಿ ಅವರು ಕೈಗೊಂಡಿದ್ದ 10 ದಿನಗಳ ಅನುಷ್ಠಾನವೂ ಮಂಗಲಗೊಂಡಿತು.
ಕರ್ನಾಟಕ, ಮಹಾರಾಷ್ಟ, ತೆಲಂಗಾಣ, ದೆಹಲಿ, ಹರ್ಯಾಣ, ರಾಜಸ್ಥಾನ, ಓರಿಸ್ಸಾ ಸೇರಿದಂತೆ ದೇಶದ ವಿವಿಧ ರಾಜ್ಯಗಳಿಂದ ಆಗಮಿಸಿದ್ದ ಭಕ್ತರು ಜಗದ್ಗುರುಗಳಿಗೆ ಗುರುವಂದನೆ ಸಲ್ಲಿಸಿದರು.ವಾರಾಣಸಿ ನಗರದ ವಿವಿಧ ವಿ.ವಿ.ಗಳ ಸಂಸ್ಕೃತ ವಿದ್ವಾಂಸರುಗಳಾದ ಡಾ. ಕಮಲೇಶ್ ಜಾ ಮತ್ತು ಡಾ.ವಿನೋದ ಪಾಠಕ್, ಕಾಶಿಪೀಠದ ವ್ಯವಸ್ಥಾಪಕ ಆರ್.ಕೆ.ಸ್ವಾಮಿ, ನಳಿನಿ ಚಿರಮೆ, ಶಿವಾನಂದ ಹಿರೇಮಠ, ಸುಭಾಷ್ ಮಮಾಣೆ ಮತ್ತಿತರರು

