ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆಯೊಂದರಲ್ಲಿ ಸಚಿವ ಬಿ. ನಾಗೇಂದ್ರ ಅವರು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದಾರೆ. ವಿಧಾನಸೌಧದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಭಾವುಕರಾಗಿ ಮಾತನಾಡಿದ ನಾಗೇಂದ್ರ, ತಮ್ಮ ವಿರುದ್ಧ ಕೇಳಿಬಂದಿರುವ ಆರೋಪಗಳನ್ನು ಸಂಪೂರ್ಣವಾಗಿ ತಳ್ಳಿಹಾಕಿದರು.
ಪಕ್ಷ ಹಾಗೂ ಸರ್ಕಾರಕ್ಕೆ ತಮ್ಮ ಪ್ರಕರಣದಿಂದ ಯಾವುದೇ ಮುಜುಗರ ಉಂಟಾಗಬಾರದು ಎಂಬ ಕಾರಣಕ್ಕೆ ಸಚಿವ ಸ್ಥಾನದಿಂದ ಕೆಳಗಿಳಿಯುವ ನಿರ್ಧಾರ ಕೈಗೊಂಡಿರುವುದಾಗಿ ಅವರು ಸ್ಪಷ್ಟಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ರಾಜ್ಯಸಭಾ ಸದಸ್ಯ ನಾಸೀರ್ ಹುಸೇನ್, ಜಿ.ಸಿ. ಚಂದ್ರಶೇಖರ್, ಸಚಿವರಾದ ಡಾ. ಅಜಯ್ ಸಿಂಗ್ ಹಾಗೂ ರಿಜ್ವಾನ್ ಅರ್ಷದ್ ಸೇರಿದಂತೆ ಹಲವು ನಾಯಕರು ಉಪಸ್ಥಿತರಿದ್ದರು.

ತಮ್ಮ ವಿರುದ್ಧ ನಡೆಯುತ್ತಿರುವ ಎಸ್ಐಟಿ ಮತ್ತು ಸಿಐಡಿ ತನಿಖೆಗಳ ಬಗ್ಗೆ ನಂಬಿಕೆ ವ್ಯಕ್ತಪಡಿಸಿದ ನಾಗೇಂದ್ರ, ತನಿಖೆಯ ಮೂಲಕ ಸತ್ಯ ಹೊರಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ವಾಲ್ಮೀಕಿ ನಿಗಮದ ಹಗರಣದಲ್ಲಿ ತಮ್ಮ ಯಾವುದೇ ಪಾತ್ರವಿಲ್ಲ. ಕೇವಲ ಸಚಿವರಾಗಿದ್ದ ಕಾರಣಕ್ಕೆ ತಮ್ಮನ್ನು ಪ್ರಕರಣದಲ್ಲಿ ಸಿಲುಕಿಸಲಾಗಿದೆ ಎಂದು ಆರೋಪಿಸಿದರು.
ಮೊದಲ ಚಾರ್ಜ್ಶೀಟ್ನಲ್ಲಿ ತಮ್ಮ ಹೆಸರು ಇರಲಿಲ್ಲ. ಆದರೆ ಎರಡನೇ ಚಾರ್ಜ್ಶೀಟ್ನಲ್ಲಿ ತಮ್ಮ ಹೆಸರನ್ನು ಸೇರಿಸಲಾಗಿದೆ ಎಂದು ಹೇಳಿದ ಅವರು, ತಾವು ಸಚಿವರಾಗಿದ್ದ ಹಿನ್ನೆಲೆಯಲ್ಲಿ ತಮ್ಮನ್ನು ಪ್ರಕರಣಕ್ಕೆ ಎಳೆದುತರಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ತಮ್ಮ ವಿರುದ್ಧ ಪ್ರಾಸಿಕ್ಯೂಷನ್ಗೆ ಅನುಮತಿ ಕೋರಿ ರಾಜ್ಯಪಾಲರ ಬಳಿಗೆ ತೆರಳಿರುವ ವಿಚಾರವನ್ನೂ ಪ್ರಸ್ತಾಪಿಸಿದ ನಾಗೇಂದ್ರ, ಪಕ್ಷದ ನಾಯಕರ ವಿರುದ್ಧವೂ ಪ್ರಕರಣಗಳಿವೆ ಎಂದು ಹೇಳಿ, “ನನಗೊಂದು ನ್ಯಾಯ, ನಿಮಗೊಂದು ನ್ಯಾಯವೇ?” ಎಂದು ಪ್ರಶ್ನಿಸಿದರು.
ವಿಪಕ್ಷಗಳ ವಿರುದ್ಧ ನಾಗೇಂದ್ರ ವಾಗ್ದಾಳಿ
ಇದೇ ವೇಳೆ ಬಿಜೆಪಿ ಹಾಗೂ ಜೆಡಿಎಸ್ ವಿರುದ್ಧವೂ ನಾಗೇಂದ್ರ ತೀವ್ರ ವಾಗ್ದಾಳಿ ನಡೆಸಿದರು. ರಾಜ್ಯದಲ್ಲಿ ಬರ, ಕಾವೇರಿ ಸೇರಿದಂತೆ ಹಲವು ಪ್ರಮುಖ ಸಮಸ್ಯೆಗಳಿದ್ದರೂ, ಅವುಗಳ ಕುರಿತು ಸದನದಲ್ಲಿ ಚರ್ಚೆಗೆ ಅವಕಾಶ ನೀಡದೆ ವಿಪಕ್ಷಗಳು ಕಲಾಪಕ್ಕೆ ಅಡ್ಡಿಪಡಿಸುತ್ತಿವೆ ಎಂದು ಆರೋಪಿಸಿದರು.
ಬಳ್ಳಾರಿ ಪಾದಯಾತ್ರೆಗೆ ಸೂಕ್ತ ಕಾರಣವಿಲ್ಲ. ರಾಜಕೀಯ ಉದ್ದೇಶದಿಂದಲೇ ಪಾದಯಾತ್ರೆ ನಡೆಸಲು ಮುಂದಾಗಿದ್ದಾರೆ ಎಂದು ಟೀಕಿಸಿದ ಅವರು, ಮಾಧ್ಯಮಗಳ ಮೂಲಕವೂ ವಿಪಕ್ಷಗಳಿಗೆ ಚರ್ಚೆಗೆ ಬರುವಂತೆ ಮನವಿ ಮಾಡಿದ್ದಾಗಿ ತಿಳಿಸಿದರು.
ಬಿಜೆಪಿ ವಿರುದ್ಧ ಸಾಮಾಜಿಕ ನ್ಯಾಯದ ವಿಚಾರವನ್ನೂ ಪ್ರಸ್ತಾಪಿಸಿದ ನಾಗೇಂದ್ರ, ಬಿಜೆಪಿ ‘ಮನುಸ್ಮೃತಿ ವಾದ’ವನ್ನು ಮುಂದಿಟ್ಟುಕೊಂಡು ಸಮಾಜದಲ್ಲಿ ಮನುವಾದವನ್ನು ಬಿತ್ತಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು. ದಲಿತರು, ಆದಿವಾಸಿಗಳು, ಮಹಿಳೆಯರು ಹಾಗೂ ಅಲ್ಪಸಂಖ್ಯಾತರನ್ನು ಗುರಿಯಾಗಿಸಲಾಗುತ್ತಿದೆ ಎಂದು ಅವರು ದೂರಿದರು

