ಕುಮಟಾ: ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಹೊಸ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರೊಬ್ಬರ ಬಂಗಾರದ ಆಭರಣ ಕಳವು ಮಾಡಿದ ಆರೋಪದ ಮೇಲೆ ಇಬ್ಬರು ಮಹಿಳೆಯರನ್ನು ಕುಮಟಾ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ಸುಮಾರು ₹2.60 ಲಕ್ಷ ಮೌಲ್ಯದ ಬಂಗಾರದ ಕರಿಮಣಿ ಸರವನ್ನು ವಶಪಡಿಸಿಕೊಳ್ಳಲಾಗಿದೆ.
ಬಂಧಿತರನ್ನು ಕುಮಟಾ ಬಡಾಳದ ಸೊಪ್ಪಿನ ಹೊನ್ನಳ್ಳಿಯ ನಿವಾಸಿಗಳಾದ ಸೀಮಾಬಾನು ಜಾವೇದ್ ಸಾಬ್ (42) ಹಾಗೂ ಶಮ್ಮಾ ಬುಡಿಯಾ ಮಹಮ್ಮದ್ ಪಿರ್ದೋಸ್ (27) ಎಂದು ಗುರುತಿಸಲಾಗಿದೆ.
ಆಗಸ್ಟ್ 18ರಂದು ಮಧ್ಯಾಹ್ನ 1.45ರಿಂದ 2 ಗಂಟೆಯ ನಡುವೆ ಚಿಕ್ಕೊಳ್ಳಿ ನಿವಾಸಿ ಭಾರತಿ ಶಿವು ನಾಯಕ ಅವರು ಕುಮಟಾ ಹೊಸ ಬಸ್ ನಿಲ್ದಾಣದಿಂದ ಹಳೆ ಬಸ್ ನಿಲ್ದಾಣದತ್ತ ತೆರಳಲು ಬಸ್ ಹತ್ತುತ್ತಿದ್ದ ವೇಳೆ, ಅವರ ವ್ಯಾನಿಟಿ ಬ್ಯಾಗ್ನಲ್ಲಿದ್ದ ಬಂಗಾರದ ಆಭರಣ ಹೊಂದಿದ್ದ ಚಿಕ್ಕ ಪರ್ಸ್ ಕಳುವಾಗಿತ್ತು. ಪರ್ಸ್ನಲ್ಲಿ ಸುಮಾರು 16 ಗ್ರಾಂ ತೂಕದ ಮಾಂಗಲ್ಯ ಸರವಿತ್ತು. ಈ ಸಂಬಂಧ ಆಗಸ್ಟ್ 19ರಂದು ಕುಮಟಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಬಸ್ ನಿಲ್ದಾಣದಲ್ಲಿ ಈ ಹಿಂದೆಯೂ ಕಿಸೆಗಳ್ಳತನದ ಪ್ರಕರಣಗಳು ವರದಿಯಾಗಿದ್ದ ಹಿನ್ನೆಲೆಯಲ್ಲಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದರು. ಕ್ರೈಂ ಬ್ರಾಂಚ್ ತಂಡವು ಬಸ್ ನಿಲ್ದಾಣದ ವಿವಿಧೆಡೆ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಗಳನ್ನು ಪರಿಶೀಲಿಸಿ, ತಾಂತ್ರಿಕ ಸಾಕ್ಷ್ಯಗಳ ಆಧಾರದ ಮೇಲೆ ಇಬ್ಬರು ಮಹಿಳೆಯರನ್ನು ಪತ್ತೆಹಚ್ಚಿ ಬಂಧಿಸಿದ್ದಾರೆ.
ವಿಚಾರಣೆ ವೇಳೆ ಆರೋಪಿಗಳಿಂದ ಕಳವು ಮಾಡಲಾಗಿದ್ದ ಬಂಗಾರದ ಕರಿಮಣಿ ಸರವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್., ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೃಷ್ಣಮೂರ್ತಿ ಹಾಗೂ ಭಟ್ಕಳ ಡಿವೈಎಸ್ಪಿ ಗಿರೀಶ್ ಬಿ. ಅವರ ಮಾರ್ಗದರ್ಶನದಲ್ಲಿ ಕುಮಟಾ ಪೊಲೀಸ್ ನಿರೀಕ್ಷಕ ಯೋಗೇಶ್ ಅವರ ನೇತೃತ್ವದಲ್ಲಿ ಪಿಎಸ್ಐ ಸಾವಿತ್ರಿ ನಾಯಕ ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.
ಕುಮಟಾ ಬಸ್ ನಿಲ್ದಾಣದಲ್ಲಿ ಇತ್ತೀಚೆಗೆ ಕಿಸೆಗಳ್ಳತನ, ಮೊಬೈಲ್ ಕಳವು ಸೇರಿದಂತೆ ಹಲವು ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಬಂಧಿತರಿಗೆ ಇನ್ನಷ್ಟು ಮಂದಿ ಸಂಪರ್ಕ ಹೊಂದಿದ್ದಾರೆಯೇ ಎಂಬ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

