ಮಂತ್ರಾಲಯ: ಗುರು ರಾಘವೇಂದ್ರ ಸ್ವಾಮಿಗಳ 355ನೇ ಆರಾಧನಾ ಮಹೋತ್ಸವದ ಅಂಗವಾಗಿ ಮಂತ್ರಾಲಯದ ಶ್ರೀ ರಾಯರ ಮಠದಲ್ಲಿ ಮಧ್ಯಾರಾಧನೆಯ ಸಂಭ್ರಮ ಕಳೆಗಟ್ಟಿದೆ. ಗುರುರಾಯರು ವೃಂದಾವನಸ್ಥರಾಗಿ 355 ವರ್ಷಗಳು ಪೂರ್ಣಗೊಂಡ ಹಿನ್ನೆಲೆಯಲ್ಲಿ ಮಠದಲ್ಲಿ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ಭಕ್ತಿಭಾವದಿಂದ ನೆರವೇರುತ್ತಿವೆ.

ಮಧ್ಯಾರಾಧನೆಯ ಪ್ರಯುಕ್ತ ಬೆಳಗ್ಗಿನಿಂದಲೇ ವಿವಿಧ ಪೂಜೆ, ಅಭಿಷೇಕ ಹಾಗೂ ಧಾರ್ಮಿಕ ಕೈಂಕರ್ಯಗಳು ನಡೆಯುತ್ತಿದ್ದು, ಸಾವಿರಾರು ಭಕ್ತರು ಮಂತ್ರಾಲಯಕ್ಕೆ ಆಗಮಿಸಿ ಗುರುರಾಯರ ದರ್ಶನ ಪಡೆದು ಪುನೀತರಾಗುತ್ತಿದ್ದಾರೆ.

ಮಂತ್ರಾಲಯದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರ ನೇತೃತ್ವದಲ್ಲಿ ಗುರು ರಾಘವೇಂದ್ರ ಸ್ವಾಮಿಗಳ ವೃಂದಾವನಕ್ಕೆ ವಿಶೇಷ ಮಹಾಪಂಚಾಮೃತ ಅಭಿಷೇಕ ನೆರವೇರಿಸಲಾಯಿತು. ಈ ವೇಳೆ ಅಪಾರ ಸಂಖ್ಯೆಯ ಭಕ್ತರು ಪಾಲ್ಗೊಂಡು ಭಕ್ತಿಭಾವ ಮೆರೆದರು.
ಇಂದು ಮಧ್ಯಾರಾಧನೆಯ ಪ್ರಮುಖ ಆಕರ್ಷಣೆಯಾಗಿ ಭವ್ಯ ಗಜ ರಥೋತ್ಸವ, ರಜತ ರಥೋತ್ಸವ ಹಾಗೂ ಚಿನ್ನದ ರಥೋತ್ಸವ ನಡೆಯಲಿದೆ. ಆರಾಧನಾ ಮಹೋತ್ಸವದ ಹಿನ್ನೆಲೆಯಲ್ಲಿ ಮಂತ್ರಾಲಯದೆಲ್ಲೆಡೆ ಹಬ್ಬದ ವಾತಾವರಣ ನಿರ್ಮಾಣವಾಗಿದ್ದು, ಭಕ್ತರಿಂದ ಕ್ಷೇತ್ರ ತುಂಬಿ ತುಳುಕುತ್ತಿದೆ.

ಗುರು ರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವವು ಭಕ್ತರಿಗೆ ಆಧ್ಯಾತ್ಮಿಕ ಭಾವನೆ ಹಾಗೂ ಪುಣ್ಯಾನುಭವವನ್ನು ನೀಡುತ್ತಿದೆ.

