ಮಂಗಳೂರು: ವಿದೇಶದ ನೆಲದಲ್ಲಿ ಹುಟ್ಟಿ ಬೆಳೆದ ಮಕ್ಕಳಲ್ಲಿ ಯಕ್ಷಗಾನದ ಆಸಕ್ತಿ ಮೂಡಿಸಿ, ಅವರಿಗೆ ಕನ್ನಡ ಭಾಷೆ ಹಾಗೂ ಕರಾವಳಿಯ ಸಾಂಸ್ಕೃತಿಕ ಪರಂಪರೆಯ ಪರಿಚಯ ನೀಡುತ್ತಿರುವ ಯಕ್ಷಗಾನ ಅಭ್ಯಾಸ ಕೇಂದ್ರ ಯು.ಎ.ಇ. ತನ್ನ 11ನೇ ವರ್ಷದ ಸಂಭ್ರಮದ ಅಂಗವಾಗಿ ತಾಯ್ನಾಡಿನಲ್ಲಿ ವಿವಿಧ ಯಕ್ಷಗಾನ ಪ್ರದರ್ಶನಗಳನ್ನು ನೀಡಿ ಗಮನ ಸೆಳೆದಿದೆ.
ಒಂದು ಕಾಲದಲ್ಲಿ ತಾಯ್ನಾಡಿನಿಂದ ಯಕ್ಷಗಾನ ಕಲಾವಿದರನ್ನು ವಿದೇಶಗಳಿಗೆ ಕರೆದೊಯ್ದು ಪ್ರದರ್ಶನ ನೀಡಲಾಗುತ್ತಿತ್ತು. ಆದರೆ ಇಂದು ವಿದೇಶದಲ್ಲೇ ಹುಟ್ಟಿ ಬೆಳೆದ ಮಕ್ಕಳು ಯಕ್ಷಗಾನದ ತರಬೇತಿ ಪಡೆದು ತವರೂರಿಗೆ ಆಗಮಿಸಿ ರಂಗದಲ್ಲಿ ತಮ್ಮ ಪ್ರತಿಭೆ ಪ್ರದರ್ಶಿಸುತ್ತಿರುವುದು ಯಕ್ಷಗಾನದ ಬೆಳವಣಿಗೆಗೆ ಸಾಕ್ಷಿಯಾಗಿದೆ.

ಕನ್ನಡ ಭಾಷೆಯ ನೇರ ಸಂಪರ್ಕವಿಲ್ಲದ ಪರಿಸರದಲ್ಲಿ ಬೆಳೆದ ಮಕ್ಕಳಿಗೆ ಕನ್ನಡವನ್ನು ಕಲಿಸಿ, ಯಕ್ಷಗಾನದ ನಾಟ್ಯ, ಅಭಿನಯ ಹಾಗೂ ವಿವಿಧ ಅಂಗಗಳಲ್ಲಿ ತರಬೇತಿ ನೀಡುತ್ತಿರುವಲ್ಲಿ ಸಂಸ್ಥೆಯ ಗುರು ಶೇಖರ್ ಡಿ. ಶೆಟ್ಟಿಗಾರ್ ಕಿನ್ನಿಗೋಳಿ ಅವರ ಪಾತ್ರ ಮಹತ್ವದ್ದಾಗಿದೆ. ಅವರ ಮಾರ್ಗದರ್ಶನದಲ್ಲಿ ಮಕ್ಕಳು ಪೂರ್ಣ ಪ್ರಮಾಣದ ನಾಟ್ಯಾಭ್ಯಾಸದ ಜೊತೆಗೆ ಯಕ್ಷಗಾನದ ಸಮಗ್ರ ಕಲಿಕೆಯತ್ತ ಹೆಜ್ಜೆ ಹಾಕುತ್ತಿದ್ದಾರೆ.
ನಾಟ್ಯಗುರು ಶರತ್ ಕುಡ್ಲ ಅವರು ಮಕ್ಕಳ ನಾಟ್ಯಾಭಿನಯವನ್ನು ಮತ್ತಷ್ಟು ಪರಿಣಾಮಕಾರಿಯಾಗಿ ರೂಪಿಸುವಲ್ಲಿ ಸಹಕರಿಸುತ್ತಿದ್ದು, ಚೆಂಡೆ-ಮದ್ದಳೆ ತರಬೇತಿಯನ್ನು ಸವಿನಯ ನೆಲ್ಲಿತೀರ್ಥ ಅವರು ನೀಡುತ್ತಿದ್ದಾರೆ. ಮಕ್ಕಳಿಗೆ ಭಾಗವತಿಕೆಯ ಮೇಲೂ ಆಸಕ್ತಿ ಮೂಡಿಸುವ ಉದ್ದೇಶದಿಂದ ಆನ್ಲೈನ್ ತರಗತಿಗಳನ್ನು ಆರಂಭಿಸಲಾಗಿದ್ದು, ಖ್ಯಾತ ಭಾಗವತರಾದ ಭವ್ಯಶ್ರೀ ಹರೀಶ್ ಕುಲ್ಕಂದ ಅವರು ತರಬೇತಿ ನೀಡುತ್ತಿದ್ದಾರೆ.

ಮಕ್ಕಳಲ್ಲಿ ವಾಕ್ಚಾತುರ್ಯ ಹಾಗೂ ಪುರಾಣ ಜ್ಞಾನ ಬೆಳೆಸುವ ಉದ್ದೇಶದಿಂದ ತಾಳಮದ್ದಳೆ ಕಾರ್ಯಕ್ರಮಗಳನ್ನೂ ಆಯೋಜಿಸಲಾಗುತ್ತಿದೆ. ಕನ್ನಡ ಭಾಷಾ ಕಲಿಕೆ, ಛಂದಸ್ಸಿನ ಅಧ್ಯಯನ, ಪುರಾಣ ಕಥೆಗಳು ಹಾಗೂ ಭಾರತೀಯ ಸಂಸ್ಕೃತಿಯ ಹಬ್ಬ-ಹರಿದಿನಗಳ ಪರಿಚಯವನ್ನು ಮಕ್ಕಳಿಗೆ ನೀಡುತ್ತಿರುವುದು ಸಂಸ್ಥೆಯ ವಿಶೇಷ ಪ್ರಯತ್ನವಾಗಿದೆ.
ಸಂಸ್ಥೆಯ ಬೆಳವಣಿಗೆಯ ಹಿಂದೆ ಸಂಚಾಲಕ ದಿನೇಶ್ ಶೆಟ್ಟಿ ಕೊಟ್ಟಿಂಜ ಅವರ ಸಂಘಟನಾ ಶ್ರಮವೂ ಪ್ರಮುಖವಾಗಿದೆ. ಉದ್ಯಮದ ಜವಾಬ್ದಾರಿಗಳ ನಡುವೆಯೂ ಕಲಾ ಸೇವೆಗೆ ಸಮಯ ಮೀಸಲಿಟ್ಟು ಮಕ್ಕಳನ್ನು ಒಗ್ಗೂಡಿಸಿ ಯಕ್ಷಗಾನ ಚಟುವಟಿಕೆಗಳನ್ನು ಮುನ್ನಡೆಸುತ್ತಿದ್ದಾರೆ. ಅವರಿಗೆ ಧರ್ಮಪತ್ನಿ ಆರತಿ ದಿನೇಶ್ ಶೆಟ್ಟಿ ಅವರ ಸಹಕಾರವೂ ದೊರೆಯುತ್ತಿದೆ. ಸಂಸ್ಥೆಯ ಕಾರ್ಯಕರ್ತರು ಹಾಗೂ ಮಕ್ಕಳ ಪೋಷಕರು ನೀಡುತ್ತಿರುವ ನಿಸ್ವಾರ್ಥ ಬೆಂಬಲವೂ ತಂಡದ ಶಕ್ತಿಯಾಗಿದೆ.

ತಾಯ್ನಾಡಿನ ಪ್ರವಾಸದ ಅಂಗವಾಗಿ ಶ್ರೀ ಕ್ಷೇತ್ರ ಕಟೀಲಿನಲ್ಲಿ ಎರಡನೇ ವರ್ಷದ ಗೆಜ್ಜೆಸೇವೆಯ ಪ್ರಯುಕ್ತ ‘ದಶಾವತಾರ’ ಯಕ್ಷಗಾನ ಬಯಲಾಟವನ್ನು ಪ್ರದರ್ಶಿಸುವ ಅವಕಾಶ ತಂಡಕ್ಕೆ ದೊರೆಯಿತು. ಕಟೀಲು ಕ್ಷೇತ್ರದ ಅಸ್ರಣ್ಣ ಬಂಧುಗಳು, ಕಟೀಲು ಮೇಳದ ಸಂಚಾಲಕ ಕಲ್ಲಾಡಿ ದೇವಿಪ್ರಸಾದ್ ಶೆಟ್ಟಿ ಹಾಗೂ ಹಿರಿಯ ಭಾಗವತರು ಮತ್ತು ಹಿಮ್ಮೇಳ ಕಲಾವಿದರು ತಂಡದ ಮಕ್ಕಳನ್ನು ಪ್ರೋತ್ಸಾಹಿಸಿದರು.
ನಂತರ ಸಾಂಸ್ಕೃತಿಕ ನಗರಿ ಮೂಡಬಿದ್ರೆಯಲ್ಲಿ ಆಳ್ವಾಸ್ ಧೀಂಕೀಟ ಯಕ್ಷಗಾನ ಅಧ್ಯಯನ ಕೇಂದ್ರದ ಸಹಭಾಗಿತ್ವದಲ್ಲಿ ‘ಮೋಹಿನೀ ಏಕಾದಶಿ’ ಯಕ್ಷಗಾನ ಪ್ರದರ್ಶನ ನಡೆಯಿತು. ಮಕ್ಕಳ ಶಿಸ್ತುಬದ್ಧ ನಾಟ್ಯ ಮತ್ತು ಕಲಾ ಪ್ರದರ್ಶನಕ್ಕೆ ಹಿರಿಯರಾದ ಡಾ. ಎಂ. ಮೋಹನ ಆಳ್ವ, ಮುರಳಿ ಕಡೆಕಾರ್, ಪಳ್ಳಿ ಕಿಶನ್ ಹೆಗ್ಡೆ, ಶ್ರೀಪತಿಭಟ್ ಹಾಗೂ ವಾಸುದೇವ ಐತಾಳ್ ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ಮುಂದಿನ ವರ್ಷವೂ ಮಕ್ಕಳಿಗೆ ಪ್ರದರ್ಶನಕ್ಕೆ ವೇದಿಕೆ ಕಲ್ಪಿಸುವ ಭರವಸೆಯನ್ನೂ ನೀಡಿದರು.

ತಾಯ್ನಾಡಿನ ಪ್ರವಾಸದ ಕೊನೆಯ ಪ್ರದರ್ಶನವಾಗಿ ಮಂಗಳಾಂಬೆಯ ದಿವ್ಯ ಸನ್ನಿಧಿಯಲ್ಲಿ ‘ಸುದರ್ಶನೋಪಾಖ್ಯಾನ’ ಯಕ್ಷಗಾನ ಪ್ರದರ್ಶನ ನಡೆಯಿತು. ತಂಡದ ಪ್ರತಿಯೊಬ್ಬ ಕಲಾವಿದರೂ ತಮ್ಮ ಸಾಮರ್ಥ್ಯಕ್ಕೆ ಮೀರಿದ ಉತ್ಸಾಹದಿಂದ ನೀಡಿದ ಪ್ರದರ್ಶನ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು.
ಈ ಸಂದರ್ಭದಲ್ಲಿ ಪ್ರತಿವರ್ಷ ನೀಡಲಾಗುವ ‘ಯಕ್ಷಶ್ರೀ ರಕ್ಷಾ’ ಗೌರವವನ್ನು ಶ್ರೀ ವಾಸು ಬಾಯಾರು ಅವರಿಗೆ ನೀಡಿ ಸನ್ಮಾನಿಸಲಾಯಿತು.

ವಿದೇಶ ಹಾಗೂ ಹೊರರಾಜ್ಯಗಳಲ್ಲಿ ಇನ್ನಷ್ಟು ಯಕ್ಷಗಾನ ತರಬೇತಿ ಸಂಸ್ಥೆಗಳು ಆರಂಭವಾಗಬೇಕು, ಮಕ್ಕಳಲ್ಲಿ ಕಲೆಯ ಬಗ್ಗೆ ಆಸಕ್ತಿ ಮೂಡಿಸುವ ಗುರುಗಳು ಹಾಗೂ ಕಲೆಯನ್ನು ಪ್ರೋತ್ಸಾಹಿಸುವ ದಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಮುಂದೆ ಬರಬೇಕು. ಯಕ್ಷಗಾನವು ವಿಶ್ವದಾದ್ಯಂತ ಮತ್ತಷ್ಟು ಬೆಳೆಯಲಿ ಎಂಬ ಆಶಯವನ್ನು ಸಂಸ್ಥೆ ವ್ಯಕ್ತಪಡಿಸಿದೆ.
ವರದಿ – ಆನಂದ ಸಾಲ್ಯಾನ್ ಕಿನ್ನಿಗೋಳಿ

