ಮಂಗಳೂರು: ವಿದ್ಯುತ್ ಸರಬರಾಜು ವ್ಯವಸ್ಥೆಯನ್ನು ಮತ್ತಷ್ಟು ಸುಧಾರಿಸಿ, ಗ್ರಾಹಕರಿಗೆ ನಿರಂತರ ಹಾಗೂ ಸುರಕ್ಷಿತ ವಿದ್ಯುತ್ ಒದಗಿಸುವ ಉದ್ದೇಶದಿಂದ ಮೆಸ್ಕಾಂ ವ್ಯಾಪ್ತಿಗೆ 395 ಹೊಸ ಪವರ್ಮ್ಯಾನ್ಗಳನ್ನು ನೇಮಕ ಮಾಡಲಾಗಿದೆ ಎಂದು ಮೆಸ್ಕಾಂ ಅಧ್ಯಕ್ಷ ಕೆ. ಹರೀಶ್ ಕುಮಾರ್ ತಿಳಿಸಿದ್ದಾರೆ.
ಮೆಸ್ಕಾಂನಲ್ಲಿ 430 ಪವರ್ಮ್ಯಾನ್ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿದ್ದು, ಒಟ್ಟು 395 ಮಂದಿಗೆ ನೇಮಕಾತಿ ಆದೇಶ ನೀಡಲಾಗಿದೆ. ಹೊಸ ನೇಮಕಾತಿಯಿಂದ ಮೆಸ್ಕಾಂ ವ್ಯಾಪ್ತಿಯಲ್ಲಿನ ಸಿಬ್ಬಂದಿ ಕೊರತೆ ಗಣನೀಯವಾಗಿ ಕಡಿಮೆಯಾಗಲಿದೆ. ಇನ್ನೂ ಸುಮಾರು 35 ಪವರ್ಮ್ಯಾನ್ಗಳ ಕೊರತೆಯಿದ್ದು, ಹೆಚ್ಚುವರಿ ನೇಮಕಾತಿಗೆ ಸರ್ಕಾರ ಅನುಮತಿ ನೀಡಿದೆ ಎಂದು ಅವರು ಮಾಹಿತಿ ನೀಡಿದರು.
ಮೆಸ್ಕಾಂ ವ್ಯಾಪ್ತಿಯಲ್ಲಿ ಸುಮಾರು 28.10 ಲಕ್ಷ ವಿದ್ಯುತ್ ಸಂಪರ್ಕಗಳು ಇದ್ದು, ಮನೆಗಳು, ವಾಣಿಜ್ಯ ಸಂಸ್ಥೆಗಳು, ಕೈಗಾರಿಕೆಗಳು ಹಾಗೂ ನೀರಾವರಿ ಪಂಪ್ಸೆಟ್ಗಳು ಇದರ ವ್ಯಾಪ್ತಿಗೆ ಬರುತ್ತವೆ. ಸುಮಾರು 97 ಸಾವಿರ ಕಿ.ಮೀ. ಕಡಿಮೆ ಒತ್ತಡದ ಹಾಗೂ 59 ಸಾವಿರ ಕಿ.ಮೀ. 11 ಕೆವಿ ಉನ್ನತ ಒತ್ತಡದ ವಿದ್ಯುತ್ ಮಾರ್ಗಗಳ ನಿರ್ವಹಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಹೆಚ್ಚಿನ ಸಿಬ್ಬಂದಿಯ ಅಗತ್ಯವಿದೆ ಎಂದು ಅವರು ಹೇಳಿದರು.
ಭೂಗತ ಕೇಬಲ್, ಲಿಂಕ್ಲೈನ್ಗೆ ಆದ್ಯತೆ
ಮಂಗಳೂರು ನಗರದಲ್ಲಿ ವಿದ್ಯುತ್ ಸರಬರಾಜನ್ನು ಹೆಚ್ಚು ಸುರಕ್ಷಿತ ಹಾಗೂ ನಿರಂತರಗೊಳಿಸಲು ಭೂಗತ ವಿದ್ಯುತ್ ಕೇಬಲ್ ವ್ಯವಸ್ಥೆ ಮತ್ತು ಲಿಂಕ್ಲೈನ್ ನಿರ್ಮಾಣಕ್ಕೆ ಆದ್ಯತೆ ನೀಡಲಾಗುತ್ತಿದೆ. ಭೂಗತ ಕೇಬಲ್ ಅಳವಡಿಕೆಯಿಂದ ಅಪಘಾತದ ಅಪಾಯ ಕಡಿಮೆಯಾಗುವುದರ ಜೊತೆಗೆ ವಿದ್ಯುತ್ ಪ್ರಸರಣ ನಷ್ಟವೂ ತಗ್ಗಲಿದೆ.
ಯಾವುದೇ ಒಂದು ಭಾಗದಲ್ಲಿ ವಿದ್ಯುತ್ ವ್ಯತ್ಯಯ ಉಂಟಾದ ಸಂದರ್ಭದಲ್ಲಿ ಪರ್ಯಾಯ ಮಾರ್ಗದ ಮೂಲಕ ಸರಬರಾಜು ಮುಂದುವರಿಸಲು ಲಿಂಕ್ಲೈನ್ ವ್ಯವಸ್ಥೆ ನೆರವಾಗಲಿದೆ. ವಿದ್ಯುತ್ ಸುರಕ್ಷತೆಗಾಗಿ ಸುಮಾರು 5,270 ದ್ವಿಮುಖ ಕಟ್ಔಟ್ಗಳನ್ನು ಅಳವಡಿಸುವ ಕಾರ್ಯವೂ ನಡೆಯುತ್ತಿದ್ದು, ಫ್ಯೂಸ್ ಸಮಸ್ಯೆಯಿಂದಾಗಿ ಮನೆಗಳ ವಿದ್ಯುತ್ ಉಪಕರಣಗಳಿಗೆ ಹಾನಿಯಾಗುವುದನ್ನು ತಡೆಯಲು ಇದು ಸಹಕಾರಿಯಾಗಲಿದೆ ಎಂದರು.
ಹೊಸ ಸಂಪರ್ಕಗಳಿಗೆ ಸ್ಮಾರ್ಟ್ ಮೀಟರ್ ಕಡ್ಡಾಯ
ಇನ್ನು ಮುಂದೆ ಹೊಸ ವಿದ್ಯುತ್ ಸಂಪರ್ಕಗಳಿಗೆ ಸ್ಮಾರ್ಟ್ ಮೀಟರ್ ಕಡ್ಡಾಯಗೊಳಿಸಲಾಗುತ್ತಿದೆ. ಮೊಬೈಲ್ ಆ್ಯಪ್ ಮೂಲಕ ಗ್ರಾಹಕರು ತಮ್ಮ ವಿದ್ಯುತ್ ಬಳಕೆ, ದೈನಂದಿನ ಬಳಕೆಯ ಪ್ರಮಾಣ ಹಾಗೂ ಬಿಲ್ ವಿವರಗಳನ್ನು ಸುಲಭವಾಗಿ ಪರಿಶೀಲಿಸಬಹುದಾಗಿದೆ.
ಬಿಲ್ ಉತ್ಪತ್ತಿಯಾಗದ ಸಂದರ್ಭದಲ್ಲಿಯೂ ಆ್ಯಪ್ ಮೂಲಕ ಬಿಲ್ ಮಾಹಿತಿ ಪಡೆದು ಪಾವತಿ ಮಾಡಲು ಅವಕಾಶ ಕಲ್ಪಿಸಲಾಗಿದೆ. ಸ್ಮಾರ್ಟ್ ಮೀಟರ್ಗಳ ಗುಣಮಟ್ಟ ಪರಿಶೀಲನೆಗಾಗಿ ನಾಲ್ಕು ಪರೀಕ್ಷಾ ಘಟಕಗಳನ್ನು ಸ್ಥಾಪಿಸಲಾಗಿದೆ. ಈ ವ್ಯವಸ್ಥೆಯಿಂದ ಗ್ರಾಹಕರಿಗೆ ವಿದ್ಯುತ್ ಬಳಕೆಯ ನಿಖರ ಮಾಹಿತಿ ದೊರೆಯುವುದರ ಜೊತೆಗೆ, ವಿದ್ಯುತ್ ಸರಬರಾಜು ವ್ಯವಸ್ಥೆಯ ನಿರ್ವಹಣೆಯೂ ಮತ್ತಷ್ಟು ಪರಿಣಾಮಕಾರಿಯಾಗಲಿದೆ ಎಂದು ಕೆ. ಹರೀಶ್ ಕುಮಾರ್ ತಿಳಿಸಿದರು.

