ಉಳ್ಳಾಲ: ಕೆ.ಪಿ.ಶ್ರೀಕಾಂತ್ ನಿರ್ಮಾಣದ ಹಾಗೂ ವೆಂಕಟಾಚಲ (ಚಲಂ) ನಿರ್ದೇಶನದ ‘ಹಲ್ಕಾ ಡಾನ್’ ಕನ್ನಡ-ತೆಲುಗು ದ್ವಿಭಾಷಾ ಆ್ಯಕ್ಷನ್ ಕಾಮಿಡಿ ಚಿತ್ರದ ಚಿತ್ರೀಕರಣ ಮಂಗಳೂರಿನಲ್ಲಿ ಬಹುತೇಕ ಪೂರ್ಣಗೊಂಡಿದೆ. ವೀನಸ್ ಎಂಟರ್ಟೈನರ್ ಬ್ಯಾನರ್ನಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರವನ್ನು ಇದೀಗ ತುಳು ಭಾಷೆಯಲ್ಲೂ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ.

ಚಿತ್ರೀಕರಣ ಪೂರ್ಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಚಿತ್ರತಂಡ ಸೋಮವಾರ ಕುತ್ತಾರು ದೆಕ್ಕಾಡು ಕೊರಗಜ್ಜ ಆದಿಸ್ಥಳಕ್ಕೆ ಭೇಟಿ ನೀಡಿ ವಿಶೇಷ ಪ್ರಾರ್ಥನೆ ಸಲ್ಲಿಸಿತು. ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ಚಿತ್ರತಂಡ ಸಿನಿಮಾದ ಕುರಿತು ಮಾಹಿತಿ ಹಂಚಿಕೊಂಡಿತು.
‘ಹಲ್ಕಾ ಡಾನ್’ ಚಿತ್ರದಲ್ಲಿ ಪ್ರಮೋದ್ ಪಂಜು, ರೂಪೇಶ್ ಶೆಟ್ಟಿ ಹಾಗೂ ಅಮೃತಾ ಅಯ್ಯಂಗಾರ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಅರವಿಂದ್ ಬೋಳಾರ್, ಸಾಯಿ ಕುಮಾರ್, ಜ್ಯೋತಿ ಪೂರ್ವಜ್ ಮತ್ತು ರಮೇಶ್ ಇಂದಿರಾ ಸೇರಿದಂತೆ ಹಲವು ಪ್ರಮುಖ ಕಲಾವಿದರು ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸತ್ಯ ಹೆಗ್ಡೆ ಛಾಯಾಗ್ರಹಣ, ಅರ್ಜುನ್ ಕಿಟ್ಟು ಸಂಕಲನ ಹಾಗೂ ವಿ. ಹರಿಕೃಷ್ಣ ಅವರ ಸಂಗೀತ ಚಿತ್ರಕ್ಕಿದೆ

ನಾಯಕ ಪ್ರಮೋದ್ ಪಂಜು ಮಾತನಾಡಿ, ಮಂಗಳೂರಿನ ಹಿನ್ನೆಲೆಯ ಕಥೆಯಲ್ಲಿ ಅಭಿನಯಿಸುವ ಅವಕಾಶ ದೊರೆತಿರುವುದು ಸಂತಸ ತಂದಿದೆ ಎಂದರು. ಅರವಿಂದ್ ಬೋಳಾರ್ ಹಾಗೂ ರೂಪೇಶ್ ಶೆಟ್ಟಿ ಅವರಂತಹ ಅನುಭವಿ ಕಲಾವಿದರೊಂದಿಗೆ ಕೆಲಸ ಮಾಡಿರುವುದು ಉತ್ತಮ ಅನುಭವ ನೀಡಿದೆ ಎಂದು ಹೇಳಿದರು. ಚಿತ್ರದ ಬಹುತೇಕ ಚಿತ್ರೀಕರಣ ಮಂಗಳೂರಿನಲ್ಲೇ ನಡೆದಿರುವುದರಿಂದ ಸ್ಥಳೀಯ ಪ್ರೇಕ್ಷಕರನ್ನು ಗಮನದಲ್ಲಿಟ್ಟುಕೊಂಡು ತುಳು ಭಾಷೆಯಲ್ಲೂ ಚಿತ್ರವನ್ನು ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ ಎಂದರು.
ನಟ ರೂಪೇಶ್ ಶೆಟ್ಟಿ ಮಾತನಾಡಿ, ಉತ್ತಮ ಬ್ಯಾನರ್ನೊಂದಿಗೆ ಕೆಲಸ ಮಾಡುವ ಬಹುದಿನಗಳ ಆಸೆ ‘ಹಲ್ಕಾ ಡಾನ್’ ಮೂಲಕ ಈಡೇರಿದೆ ಎಂದರು. ಚಿತ್ರದ ಕಥೆ ಹಾಗೂ ‘ಹಲ್ಕಾ ಡಾನ್’ ಎಂಬ ಶೀರ್ಷಿಕೆಯೇ ಕುತೂಹಲ ಮೂಡಿಸುವಂತಿದ್ದು, ಮಂಗಳೂರಿನ ಡಾನ್ ಒಬ್ಬನ ಕಥೆಯನ್ನು ವಿಭಿನ್ನ ಹಾಸ್ಯ ಮತ್ತು ಆ್ಯಕ್ಷನ್ ಮೂಲಕ ಕಟ್ಟಿಕೊಡಲಾಗಿದೆ ಎಂದು ಹೇಳಿದರು.

ನಿರ್ದೇಶಕ ವೆಂಕಟಾಚಲ (ಚಲಂ) ಮಾತನಾಡಿ, ಆಕರ್ಷಕ ಹಾಗೂ ಮುಗ್ಧ ಸ್ವಭಾವದ ವ್ಯಕ್ತಿಯೊಬ್ಬ ಅನಿರೀಕ್ಷಿತವಾಗಿ ಪ್ರಬಲ ಗ್ಯಾಂಗ್ನ ಪ್ರಮುಖ ವ್ಯಕ್ತಿಯಾಗುವ ಕಥೆಯನ್ನು ಚಿತ್ರ ಒಳಗೊಂಡಿದೆ. ಸ್ಥಳೀಯ ಭೂಗತ ಲೋಕದ ಪೈಪೋಟಿಯಲ್ಲಿ ಸಿಲುಕುವ ನಾಯಕ ತನ್ನ ಬುದ್ಧಿವಂತಿಕೆ, ಮೈತ್ರಿಗಳು ಹಾಗೂ ಅಮೃತಾ ಅವರ ಪಾತ್ರದ ನೆರವಿನಿಂದ ಸಮಸ್ಯೆಗಳನ್ನು ಹೇಗೆ ಎದುರಿಸುತ್ತಾನೆ ಎಂಬುದನ್ನು ಹಾಸ್ಯ ಮತ್ತು ಆ್ಯಕ್ಷನ್ನೊಂದಿಗೆ ಚಿತ್ರಿಸಲಾಗಿದೆ ಎಂದರು. ಇದು ತಮ್ಮ ಮೊದಲ ನಿರ್ದೇಶನದ ಚಿತ್ರವಾಗಿದ್ದು, ದೊಡ್ಡ ಬ್ಯಾನರ್ನಲ್ಲಿ ಕೆಲಸ ಮಾಡುವ ಅವಕಾಶ ಸಿಕ್ಕಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು.
ನಿರ್ಮಾಪಕ ಕೆ.ಪಿ. ಶ್ರೀಕಾಂತ್ ಮಾತನಾಡಿ, ಆರಂಭದಲ್ಲಿ ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ಚಿತ್ರ ಬಿಡುಗಡೆ ಮಾಡುವ ಉದ್ದೇಶವಿತ್ತು. ಆದರೆ ಮಂಗಳೂರಿನಲ್ಲಿ ಹೆಚ್ಚಿನ ಚಿತ್ರೀಕರಣ ನಡೆದಿರುವ ಹಿನ್ನೆಲೆಯಲ್ಲಿ ಇಲ್ಲಿನ ಜನರ ಭಾಷೆಯಾದ ತುಳುವಿನಲ್ಲೂ ಚಿತ್ರವನ್ನು ಪ್ರೇಕ್ಷಕರಿಗೆ ತಲುಪಿಸುವ ನಿರ್ಧಾರ ಕೈಗೊಳ್ಳಲಾಗಿದೆ ಎಂದರು.

ಮಂಗಳೂರಿನ ಪ್ರೇಕ್ಷಕರು ಉತ್ತಮ ಸಿನಿಮಾಗಳನ್ನು ಗುರುತಿಸುವ ಸಾಮರ್ಥ್ಯ ಹೊಂದಿದ್ದು, ಇಲ್ಲಿ ಚಿತ್ರ ಯಶಸ್ವಿಯಾದರೆ ಇಡೀ ಕರ್ನಾಟಕದಲ್ಲೂ ಯಶಸ್ಸು ಸಿಗಲಿದೆ ಎಂಬ ವಿಶ್ವಾಸವಿದೆ ಎಂದು ಅವರು ಹೇಳಿದರು. ಕುತ್ತಾರು ಕೊರಗಜ್ಜ ಸನ್ನಿಧಿಗೆ ಭೇಟಿ ನೀಡಿ ಆಶೀರ್ವಾದ ಪಡೆದಿರುವುದಾಗಿ ತಿಳಿಸಿದ ಶ್ರೀಕಾಂತ್, ಚಿತ್ರಕ್ಕೆ ಪರಶುರಾಮನ ಆಶೀರ್ವಾದ ಇರಲಿ ಎಂದು ಆಶಿಸಿದರು.
ಹಾಸ್ಯ ನಟ ಅರವಿಂದ್ ಬೋಳಾರ್ ಮಾತನಾಡಿ, ಕೆ.ಪಿ. ಶ್ರೀಕಾಂತ್ ಹಾಗೂ ನಾಗೇಂದ್ರ ಪ್ರಸಾದ್ ಅವರ ಸಹಯೋಗದಲ್ಲಿ ಉತ್ತಮ ಚಿತ್ರ ಮೂಡಿಬರುತ್ತಿದ್ದು, ತಂಡದೊಂದಿಗೆ ಕೆಲಸ ಮಾಡುತ್ತಿರುವುದು ಸಂತಸ ತಂದಿದೆ ಎಂದರು. ಚಿತ್ರದ ಸೆಟ್ನ ವಾತಾವರಣ ಉತ್ತಮವಾಗಿದ್ದು, ‘ಹಲ್ಕಾ ಡಾನ್’ ಯಶಸ್ವಿಯಾಗುವ ವಿಶ್ವಾಸವಿದೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ನಿರ್ದೇಶಕ ಹಾಗೂ ನಟ ಸುಜಯ್ ಶಾಸ್ತ್ರಿ, ಮ್ಯಾನೇಜರ್ ಸುಧೀರ್, ನಿರ್ದೇಶಕ ಚಲಂ, ನಿರ್ಮಾಪಕ ಕೆ.ಪಿ.ಶ್ರೀಕಾಂತ್, ಅರವಿಂದ್ ಬೋಳಾರ್, ಛಾಯಾಗ್ರಾಹಕ ಸತ್ಯ ಹೆಗ್ಡೆ, ಶ್ರೀ ಪಂಜಂದಾಯ ಬಂಟ ವೈದ್ಯನಾಥ ಆದಿ ಕೊರಗತನಿಯ ಸೇವಾ ಟ್ರಸ್ಟೀ ಮಹಾಬಲ ಹೆಗ್ಡೆ ದೆಪ್ಪೆಲಿಮಾರ್, ರೂಪೇಶ್ ಶೆಟ್ಟಿ ಹಾಗೂ ಗೌತಮ್ ಮಂಗಳೂರು ಉಪಸ್ಥಿತರಿದ್ದರು.

