ಮಂಗಳೂರು : ಮಂಗಳೂರು: ಶ್ರೀಲ ಪ್ರಭುಪಾದರ ಇಸ್ಕಾನ್ ಗೋವರ್ಧನ ಹಿಲ್ಸ್ ಮಂಗಳೂರು, ಶ್ರೀ ಶ್ರೀ ಕೃಷ್ಣ ಬಲರಾಮ ಮಂದಿರ ಹಾಗೂ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಸಹಭಾಗಿತ್ವದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಮಹೋತ್ಸವ-2026 ಸೆಪ್ಟೆಂಬರ್ 3 ಮತ್ತು 4ರಂದು ಪಿಲಿಕುಳದ ಸೌಟ್ ಭವನದಲ್ಲಿ ನಡೆಯಲಿದೆ.
ಎರಡು ದಿನಗಳ ಕಾಲ ನಡೆಯುವ ಈ ವೈಭವದ ಧಾರ್ಮಿಕ ಮತ್ತು ಸಾಂಸ್ಕೃತಿಕ ಮಹೋತ್ಸವದಲ್ಲಿ ಶ್ರೀ ಕೃಷ್ಣ ಬಲರಾಮರ ಮಂಗಳಾರತಿ, ಶೃಂಗಾರಾರತಿ, ಪುಷ್ಪಾಂಜಲಿ ಸೇವೆ, ತೊಟ್ಟಿಲು ಸೇವೆ, ಅಭಿಷೇಕ, ಹೋಮ, ಮಹಾಮಂಗಳಾರತಿ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.
ಸೆಪ್ಟೆಂಬರ್ 3ರಂದು ಗುರುವಾರ ಬೆಳಗ್ಗೆ 9 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ಹಾಗೂ ಸೆಪ್ಟೆಂಬರ್ 4ರಂದು ಶುಕ್ರವಾರ ಬೆಳಗ್ಗೆ 9 ಗಂಟೆಯಿಂದ ರಾತ್ರಿ 12.30 ಗಂಟೆಯವರೆಗೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಮಹೋತ್ಸವದ ಅಂಗವಾಗಿ ಆಳ್ವಾಸ್ ಸಾಂಸ್ಕೃತಿಕ ಕಾರ್ಯಕ್ರಮ, ಅಂತಾರಾಷ್ಟ್ರೀಯ ಭಜನಾ ಕಾರ್ಯಕ್ರಮ, ಶ್ರೀ ಕೃಷ್ಣ ವೈಭವ ಸಾಂಸ್ಕೃತಿಕ ಕಾರ್ಯಕ್ರಮ, ಶ್ರೀ ಕೃಷ್ಣ ಜನ್ಮಾಷ್ಟಮಿ ಅಭಿಷೇಕ ಹಾಗೂ ಭವ್ಯ ಮಹಾಭಿಷೇಕ ನಡೆಯಲಿದೆ.
ಮಕ್ಕಳಿಗಾಗಿ ವಿಶೇಷ ಕಾರ್ಯಕ್ರಮಗಳು, ಆಹಾರ ಮಳಿಗೆ, ಗಿಫ್ಟ್ ಸೆಂಟರ್ ಹಾಗೂ ಸಾವಯವ ಉತ್ಪನ್ನಗಳ ಮಳಿಗೆಗಳನ್ನೂ ಆಯೋಜಿಸಲಾಗಿದೆ.
ಸೆಪ್ಟೆಂಬರ್ 4ರಂದು ಶ್ರೀ ಕೃಷ್ಣ ಜನ್ಮಾಷ್ಟಮಿ ಹೋಮ, ಸಭಾ ಕಾರ್ಯಕ್ರಮ, ಶ್ರೀ ಕೃಷ್ಣ ಭವ್ಯ ಮಹಾಭಿಷೇಕ ಹಾಗೂ ಮಹಾಮಂಗಳಾರತಿಯೊಂದಿಗೆ ಶ್ರೀ ಕೃಷ್ಣ ಜನ್ಮಾಷ್ಟಮಿ ಮಹೋತ್ಸವ-2026ಕ್ಕೆ ಅದ್ದೂರಿ ತೆರೆ ಬೀಳಲಿದೆ ಎಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


