ಮಂಗಳೂರು: ಕದ್ರಿ ಶ್ರೀ ಗೋಪಾಲಕೃಷ್ಣ ಮಠ ಹಾಗೂ ಕದ್ರಿ ಶ್ರೀ ಮಂಜುನಾಥ ದೇವಸ್ಥಾನವನ್ನು ಕೇಂದ್ರವಾಗಿಸಿಕೊಂಡು ಸೆಪ್ಟೆಂಬರ್ 4 ಮತ್ತು 5ರಂದು ಶ್ರೀಕೃಷ್ಣ ಜನ್ಮಾಷ್ಟಮಿ ಮಹೋತ್ಸವ ಹಾಗೂ ಸಂಪ್ರದಾಯಬದ್ಧ ಮೊಸರುಕುಡಿಕೆ ಉತ್ಸವವನ್ನು ವಿಜೃಂಭಣೆಯಿಂದ ಆಯೋಜಿಸಲಾಗಿದೆ ಎಂದು ಶ್ರೀಕೃಷ್ಣ ಜನ್ಮಾಷ್ಟಮಿ ಮಹೋತ್ಸವ ಸಮಿತಿಯ ಪ್ರಮುಖ ಸುಧಾಕರ್ ರಾವ್ ಪೇಜಾವರ ತಿಳಿಸಿದ್ದಾರೆ.
ಸೆಪ್ಟೆಂಬರ್ 4ರಂದು ಅಷ್ಟಮಿ ಅಂಗವಾಗಿ ಕದ್ರಿ ದೇವಸ್ಥಾನದಲ್ಲಿ ಶ್ರೀಕೃಷ್ಣನಿಗೆ ವಿಶೇಷ ಅಲಂಕಾರ ಹಾಗೂ ಗಂಧದ ಪಲ್ಲಕ್ಕಿ ಉತ್ಸವ ನಡೆಯಲಿದೆ. ಬಳಿಕ ಭಜನೆ, ಮಂಗಳವಾದ್ಯ ಹಾಗೂ ವಿವಿಧ ವಾದ್ಯಘೋಷಗಳೊಂದಿಗೆ ಭವ್ಯ ಶೋಭಾಯಾತ್ರೆ ಮೂಲಕ ಶ್ರೀ ಗೋಪಾಲಕೃಷ್ಣ ಮಠಕ್ಕೆ ದೇವರ ಮೂರ್ತಿಯನ್ನು ಕರೆತರಲಾಗುವುದು.

ಸೆಪ್ಟೆಂಬರ್ 5ರಂದು ಸಂಜೆ ವಿಠಲನ ಪಿಂಡಿ ಹಾಗೂ ಮೊಸರುಕುಡಿಕೆ ಉತ್ಸವ ನಡೆಯಲಿದ್ದು, ಶ್ರೀ ಗೋಪಾಲಕೃಷ್ಣ ಮಠದಿಂದ ಆರಂಭವಾಗುವ ಭವ್ಯ ಶೋಭಾಯಾತ್ರೆಯು ಕದ್ರಿ ಮಲ್ಲಿಕಟ್ಟೆ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಸಂಚರಿಸಲಿದೆ. ಸುಮಾರು ಮೂರರಿಂದ ಮೂರುವರೆ ಕಿಲೋಮೀಟರ್ ಸಾಗುವ ಮೆರವಣಿಗೆಯ ಮಾರ್ಗದುದ್ದಕ್ಕೂ ಮೊಸರುಕುಡಿಕೆಗಳನ್ನು ಕಟ್ಟಲಾಗಿದ್ದು, ನೇಮಕಗೊಂಡ ಯುವಕರ ತಂಡಗಳು ಸಂಪ್ರದಾಯಬದ್ಧವಾಗಿ ಮೊಸರುಕುಡಿಕೆ ಒಡೆಯುವ ಮೂಲಕ ಉತ್ಸವದ ಸಂಭ್ರಮವನ್ನು ಹೆಚ್ಚಿಸಲಿವೆ ಎಂದರು.
ಸಮಿತಿಯು ಕೇವಲ ಜನ್ಮಾಷ್ಟಮಿ ಆಚರಣೆಗೆ ಸೀಮಿತವಾಗದೆ ವರ್ಷಪೂರ್ತಿ ಸಾಮಾಜಿಕ, ಶೈಕ್ಷಣಿಕ ಹಾಗೂ ಸೇವಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದೆ. ಕದ್ರಿ ದೇವಸ್ಥಾನದ ವಿವಿಧ ಧಾರ್ಮಿಕ ಕಾರ್ಯಕ್ರಮಗಳಿಗೆ ಸಹಕಾರ ನೀಡುವುದರ ಜೊತೆಗೆ ಕದ್ರಿ ಸರ್ಕಾರಿ ಪ್ರೌಢಶಾಲೆಯ ಅಭಿವೃದ್ಧಿ, ರುದ್ರಭೂಮಿ ನಿರ್ವಹಣೆ ಹಾಗೂ ಕ್ರೀಡಾರಂಗದ ಸಂರಕ್ಷಣೆಯಲ್ಲಿಯೂ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಂಘಟನೆಯ ಪ್ರಮುಖರಾದ ಕಿರಣ್ ಜೋಗಿ, ಸುಜಿತ್ ರಾವ್, ಮೋಹನ್ ಕೊಪ್ಪಳ, ಮಹೇಶ್ ಪಟೇಲ್ ಕದ್ರಿ ಹಾಗೂ ರವಿಕಿರಣ್ ಉಪಸ್ಥಿತರಿದ್ದರು.

