ಧಾರವಾಡ : ವಿದ್ಯಾರ್ಥಿಗಳು ಸತ್ಯಾನ್ವೇಷಣೆಗೆ ತೆರೆದುಕೊಳ್ಳುವಂತಹ ನೈತಿಕ ನೆಲೆಯ ಶ್ರೇಷ್ಠ ಸಂಸ್ಕಾರಪೂರ್ಣ ವಿದ್ಯಾರ್ಜನೆಯಿಂದ ಉನ್ನತ ವ್ಯಕ್ತಿತ್ವ ನಿರ್ಮಾಣ ಸಾಧ್ಯವಾಗುತ್ತದೆ ಎಂದು ಅಮ್ಮಿನಬಾವಿ ಸಂಸ್ಥಾನ ಪಂಚಗೃಹ ಹಿರೇಮಠದ ಶ್ರೀಅಭಿನವ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಪ್ರತಿಪಾದಿಸಿದರು.
ಅವರು ಸೋಮವಾರ ತಾಲೂಕಿನ ಅಮ್ಮಿನಬಾವಿ ಸಮೂಹ ಶಿಕ್ಷಣ ಸಂಸ್ಥೆಯ ಶ್ರೀಶಾಂತೇಶ್ವರ ಪ್ರೌಢ ಶಾಲೆಯ ಅಧ್ಯಾಪಕಿ ಸುಮನ್ ಬೋಂಗಾಳೆ ಅವರ ನಿವೃತ್ತಿ ಸಂದರ್ಭದಲ್ಲಿ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಸಮಾರಂಭದ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದರು. ವಿದ್ಯಾರ್ಥಿಗಳು ಭೌತಿಕ ಶಿಕ್ಷಣದಲ್ಲಿ ಸಾಧನೆಗೈದರೆ ಸಾಲದು ಅವರಿಗೆ ಆಧ್ಯಾತ್ಮದ ಮೌಲ್ಯಗಳ ತನ್ಮಯತೆ ಇರಬೇಕಾಗುತ್ತದೆ. ತಮ್ಮ 39 ವರ್ಷಗಳ ಅಖಂಡ ಸೇವೆಯಲ್ಲಿ ಸುಮನ್ ಬೋಂಗಾಳೆ ಗುರುಮಾತೆ ವಿಶಿಷ್ಟ ಬೋಧನೆಯಿಂದ ಸಾವಿರಾರು ವಿದ್ಯಾರ್ಥಿಗಳ ಬಾಳು ಬೆಳಗಲು ಮಾರ್ಗದರ್ಶನ ಮಾಡಿದ್ದಾರೆ ಎಂದೂ ಶ್ರೀಅಭಿನವ ಶಾಂತಲಿ0ಗ ಶಿವಾಚಾರ್ಯರು ನುಡಿದರು.

ಪ್ರೌಢ ಶಾಲೆಯ ನಿವೃತ್ತ ಮುಖ್ಯಾಧ್ಯಾಪಕರುಗಳಾದ ಎನ್.ಬಿ.ಪವಾರ, ಪುಷ್ಪಾ ಬಾಗಲವಾಡಿ, ಆರ್.ಎಸ್. ಗುಲಗಂಜಿಕೊಪ್ಪ, ಲೇಖಕ ಗುರುಮೂರ್ತಿ ಯರಗಂಬಳಿಮಠ, ವಕೀಲ ಸುನೀಲ ಗುಡಿ, ಡಾ.ಈರಣ್ಣ ಅಮ್ಮಿನಬಾವಿ, ಡಾ.ಭಾರತಿ ಗಾಣಿಗೇರ, ಸುರೇಖಾ ಲೋಕೂರ, ಸುಜಾತಾ ಮುತಾಲಿಕದೇಸಾಯಿ ಮಾತನಾಡಿ ಸುಮನ ಬೋಂಗಾಳೆ ಅವರ ಕ್ರಿಯಾಪ್ರೇರಕ ಬೋಧನೆಯನ್ನು ಪ್ರಶಂಸಿಸಿದರು.

ಶಾಲಾ ಆಡಳಿತಮಂಡಳಿಯ ಕಾರ್ಯಧ್ಯಕ್ಷ ಶೇಖಣ್ಣ ಹುಲಗೂರ, ಉಪಾಧ್ಯಕ್ಷ ಎಂ.ಜಿ.ಕುಸೂಗಲ್ಲ, ನಿರ್ದೇಶಕರುಗಳಾದ ಬಿ.ಎನ್. ನವಲಗುಂದ, ಮಾಳಪ್ಪ ಅಮರಶೆಟ್ಟಿ, ಸುನಿಲ ಗುಡಿ, ಜಿ.ಎಂ.ಹಂಚಿನಾಳ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಕೋಶಾಧ್ಯಕ್ಷ ರಾಜಶೇಖರ್ ಹೊನ್ನಪ್ಪನವರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಜಿತಕುಮಾರ ದೇಸಾಯಿ, ಜಿಲ್ಲಾ ಕೋಶಾಧ್ಯಕ್ಷ ಶಂಕರ ಘಟ್ಟಿ, ತಾಲೂಕು ಅಧ್ಯಕ್ಷ ಕೃಷ್ಣ ಬೋಂಗಾಳೆ, ಎನ್.ಎಸ್.ಕಮ್ಮಾರ, ಬಿ.ಎಫ್.ವಾಸನದ ಇದ್ದರು.
ಬೀಳ್ಕೊಡುಗೆ ಸ್ವೀಕರಿಸಿ ಮಾತನಾಡಿದ ಸುಮನ ಬೋಂಗಾಳೆ ಅವರು ತಮ್ಮ ಸೇವೆಯುದ್ದಕ್ಕೂ ಮಾರ್ಗದರ್ಶನ ಮಾಡಿದವರನ್ನು ಸ್ಮರಿಸಿ ಕೃತಜ್ಞತೆ ಸಲ್ಲಿಸಿದರು. ಮುಖ್ಯಾಧ್ಯಾಪಕ ನಾಗರಾಜ ಅಮರಗೋಳ ಸ್ವಾಗತಿಸಿದರು. ಲಲಿತಾ ಎಂ. ನಿರೂಪಿಸಿದರು. ಎಂ.ಎಸ್.ಬಾಗೇವಾಡಿ ವಂದಿಸಿದರು.

