ಮಂಗಳೂರು: ಇ-ಸ್ವತ್ತು 2.0 ತಂತ್ರಾಂಶದ ಲೋಪದೋಷಗಳಿಂದ ಗ್ರಾಮೀಣ ಪ್ರದೇಶದ ಆಸ್ತಿ ಮಾಲೀಕರು, ರೈತರು ಹಾಗೂ ಬಡ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿದ್ದು, ಸರ್ಕಾರ ತಕ್ಷಣ ಸಮಸ್ಯೆ ಪರಿಹರಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು ಆಗ್ರಹಿಸಿದರು.
ಮನಪಾ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಡಿಜಿಟಲೀಕರಣದ ಹೆಸರಿನಲ್ಲಿ ಜಾರಿಗೊಂಡಿರುವ ಇ-ಸ್ವತ್ತು 2.0 ವ್ಯವಸ್ಥೆ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸುವ ಬದಲು ಕಚೇರಿಗಳ ಅಲೆದಾಟ, ವಿಳಂಬ ಹಾಗೂ ಮಾನಸಿಕ ಕಿರುಕುಳಕ್ಕೆ ಕಾರಣವಾಗಿದೆ ಎಂದು ಆರೋಪಿಸಿದರು.
ಸರ್ಕಾರದ ಮಾಹಿತಿಯಂತೆ, ಡಿಸೆಂಬರ್ 1, 2025ರ ಬಳಿಕ ಸಲ್ಲಿಕೆಯಾದ 1,84,227 ಅರ್ಜಿಗಳ ಪೈಕಿ 23,802 ಅರ್ಜಿಗಳು ವಿಲೇವಾರಿಗೆ ಬಾಕಿಯಿದ್ದು, 6,290 ಅರ್ಜಿಗಳು ತಿರಸ್ಕೃತಗೊಂಡಿವೆ ಎಂದರು.
ಗ್ರಾಮ ಪಂಚಾಯಿತಿ ಮಟ್ಟದಲ್ಲಿದ್ದ ಅಧಿಕಾರವನ್ನು ಇಒ ಹಾಗೂ ಜಿಲ್ಲಾ ಪಂಚಾಯಿತಿ ಸಿಇಒ ಮಟ್ಟಕ್ಕೆ ವರ್ಗಾಯಿಸಿರುವುದರಿಂದ ಗ್ರಾಮೀಣ ಜನರು ತಾಲೂಕು ಮತ್ತು ಜಿಲ್ಲಾ ಕೇಂದ್ರಗಳಿಗೆ ಅಲೆದಾಡುವಂತಾಗಿದೆ. 11ಎ ಹಾಗೂ 11ಬಿ ಅರ್ಜಿಗಳ ವಿಲೇವಾರಿ ಪ್ರಕ್ರಿಯೆಯನ್ನು ಸರಳೀಕರಿಸುವ ಜತೆಗೆ ತಂತ್ರಾಂಶದ ಸರ್ವರ್ ಸಮಸ್ಯೆಗಳನ್ನು ತಕ್ಷಣ ಸರಿಪಡಿಸಬೇಕು ಎಂದು ಅವರು ಒತ್ತಾಯಿಸಿದರು.
ಮನೆ ನಿರ್ಮಾಣದ ಅನುಮತಿ ಹಾಗೂ ಕಟ್ಟಡ ಪರವಾನಿಗೆ ಪಡೆಯುವಲ್ಲಿ ವಿಳಂಬದಿಂದ ಬಡ ಜನರು ಸಂಕಷ್ಟ ಅನುಭವಿಸುತ್ತಿದ್ದು, ಈ ಸಮಸ್ಯೆಯನ್ನು ರಾಜಕೀಯವಾಗಿ ನೋಡದೆ ಸರ್ಕಾರ ತಕ್ಷಣ ಪರಿಹರಿಸಬೇಕು ಎಂದು ಕಿಶೋರ್ ಕುಮಾರ್ ಪುತ್ತೂರು ಆಗ್ರಹಿಸಿದರು.

