ಮುಂಬೈ: ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯನ್ ಅವರ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ತನಿಖೆಗೆ ಬಾಂಬೆ ಹೈಕೋರ್ಟ್ ಆದೇಶಿಸಿದೆ. ದಿಶಾ ಅವರ ತಂದೆ ಸತೀಶ್ ಸಾಲಿಯನ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಸಾರಂಗ್ ವಿ. ಕೊತ್ವಾಲ್ ಮತ್ತು ರಂಜಿತ್ ರಾಜ್ ಭೋಸಲೆ ಅವರ ಪೀಠ ಈ ಆದೇಶ ನೀಡಿದೆ.
ತಮ್ಮ ಮಗಳ ಸಾವಿನ ತನಿಖೆಯಲ್ಲಿ ಮುಂಬೈ ಪೊಲೀಸರು ಲೋಪ ಎಸಗಿದ್ದಾರೆ ಎಂದು ಸತೀಶ್ ಸಾಲಿಯನ್ ಆರೋಪಿಸಿದ್ದರು. ಪ್ರಕರಣದ ಮರುತನಿಖೆ ನಡೆಸುವಂತೆ ಕೋರಿ ಅವರ ಪರ ವಕೀಲ ನೀಲೇಶ್ ಓಜಾ ಅವರು ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು.

ದಿಶಾ ಸಾಲಿಯನ್ ಅವರ ಸಾವು ಆಕಸ್ಮಿಕವಲ್ಲ, ಆತ್ಮಹತ್ಯೆಯೂ ಅಲ್ಲ; ಇದೊಂದು ಕೊಲೆ ಎಂದು ಕುಟುಂಬದವರು ಆರೋಪಿಸಿರುವುದಾಗಿ ಅರ್ಜಿಯಲ್ಲಿ ತಿಳಿಸಲಾಗಿತ್ತು. ಅಲ್ಲದೆ, ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ನಡೆದಿರುವ ಶಂಕೆ ವ್ಯಕ್ತಪಡಿಸಲಾಗಿದ್ದು, ಈ ಆರೋಪಗಳಿದ್ದರೂ ಪೊಲೀಸರು ಎಫ್ಐಆರ್ ದಾಖಲಿಸದೇ ಕೇವಲ ಆಕಸ್ಮಿಕ ಸಾವಿನ ಪ್ರಕರಣವಾಗಿ ದಾಖಲಿಸಿರುವುದನ್ನು ಪ್ರಶ್ನಿಸಲಾಗಿತ್ತು.
ಪೊಲೀಸರ ಪ್ರಕಾರ, ದಿಶಾ ಸಾಲಿಯನ್ ಅವರು ಕಟ್ಟಡದ 14ನೇ ಮಹಡಿಯಿಂದ ಬಿದ್ದು ಮೃತಪಟ್ಟಿದ್ದರು. ಆದರೆ ಪ್ರಕರಣಕ್ಕೆ ಸಂಬಂಧಿಸಿದ ಸಾಕ್ಷ್ಯಗಳು, ವಸ್ತುಗಳು ಹಾಗೂ ವರದಿಗಳು ಸಾವಿನ ಸ್ವರೂಪದ ಕುರಿತು ಹಲವು ಅನುಮಾನಗಳನ್ನು ಹುಟ್ಟುಹಾಕುತ್ತವೆ ಎಂದು ಅರ್ಜಿದಾರರ ಪರ ವಕೀಲರು ವಾದಿಸಿದ್ದರು.
ಕುಟುಂಬದವರು ಠಾಣೆಗೆ ತೆರಳಿ ಗಂಭೀರ ಆರೋಪಗಳನ್ನು ಮಾಡಿದ ಸಂದರ್ಭದಲ್ಲಿ ಎಫ್ಐಆರ್ ದಾಖಲಿಸಿ ತನಿಖೆ ಆರಂಭಿಸಬೇಕಿತ್ತು. ಆದರೆ ಅದಕ್ಕೆ ಅಡ್ಡಿಯಾದವರು ಯಾರು ಎಂಬುದನ್ನೂ ನ್ಯಾಯಾಲಯ ಪ್ರಶ್ನಿಸಿತ್ತು ಎಂದು ವಕೀಲ ನೀಲೇಶ್ ಓಜಾ ತಿಳಿಸಿದ್ದಾರೆ.
ಪ್ರಕರಣದ ತನಿಖೆಯಲ್ಲಿನ ಅಂಶಗಳನ್ನು ಪರಿಗಣಿಸಿದ ಹೈಕೋರ್ಟ್ ಇದೀಗ ಸಿಬಿಐ ತನಿಖೆಗೆ ಆದೇಶಿಸಿದೆ.

