ಕುಂದಾಪುರ: ಕಡುಬಡತನ, ಜೀವನದ ಸಂಕಷ್ಟಗಳು ಹಾಗೂ ಉದ್ಯಮ ಕ್ಷೇತ್ರದಲ್ಲಿನ ಹಿನ್ನಡೆಗಳನ್ನು ಪರಿಶ್ರಮ, ಆತ್ಮವಿಶ್ವಾಸ ಮತ್ತು ಛಲದಿಂದ ಮೆಟ್ಟಿನಿಂತು ಯಶಸ್ಸಿನ ಶಿಖರಕ್ಕೇರಿದ ಸಾಧಕ ಕೋತ್ವಾಲ್ ಪದ್ಮನಾಭ ಶೇರುಗಾರ್. ಸಮಾಜಸೇವಕ ಹಾಗೂ ಯಶಸ್ವಿ ಉದ್ಯಮಿಯಾಗಿ ಗುರುತಿಸಿಕೊಂಡಿರುವ ಅವರ ಜೀವನಗಾಥೆ ಯುವಜನತೆಗೆ ಪ್ರೇರಣಾದಾಯಕವಾಗಿದೆ.
ಕುಂದಾಪುರ ತಾಲೂಕಿನ ಗುಜ್ಜಾಡಿ ಗ್ರಾಮದ ಕೋಟೇಕೇರಿಯ ಕುಟುಂಬದಲ್ಲಿ ವೆಂಕಟರಮಣ ಶೇರುಗಾರ್ ಹಾಗೂ ಗಿರಿಜಾ ದಂಪತಿಯ ಪುತ್ರನಾಗಿ 1968ರ ಜುಲೈ 22ರಂದು ಪದ್ಮನಾಭ ಶೇರುಗಾರ್ ಜನಿಸಿದರು. ಕೋತ್ವಾಲ್ ಕುಟುಂಬದ ಹಿನ್ನೆಲೆ ಹೊಂದಿದ್ದರೂ ಬಾಲ್ಯದಲ್ಲೇ ಆರ್ಥಿಕ ಸಂಕಷ್ಟಗಳನ್ನು ಎದುರಿಸಿದರು. ಗುಜ್ಜಾಡಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಅವರು, ಗಂಗೊಳ್ಳಿಯ ಎಸ್.ವಿ. ಜೂನಿಯರ್ ಕಾಲೇಜಿನಲ್ಲಿ ಹತ್ತನೇ ತರಗತಿವರೆಗೆ ವ್ಯಾಸಂಗ ಮಾಡಿದರು.
ಹೆಚ್ಚಿನ ಶಿಕ್ಷಣ ಪಡೆಯುವ ಆಸೆ ಇದ್ದರೂ ಕುಟುಂಬದ ಆರ್ಥಿಕ ಪರಿಸ್ಥಿತಿ ಅವರನ್ನು ಉದ್ಯೋಗದತ್ತ ಕರೆದೊಯ್ದಿತು. ಜೀವನದಲ್ಲಿ ಸಾಧಿಸಬೇಕೆಂಬ ದೃಢಸಂಕಲ್ಪದೊಂದಿಗೆ ಮುಂಬೈಗೆ ತೆರಳಿದ ಅವರು, ಡೈ ಮೇಕಿಂಗ್ ಸಂಸ್ಥೆಯೊಂದರಲ್ಲಿ ಕೆಲಸಕ್ಕೆ ಸೇರಿ ಕಠಿಣ ಪರಿಶ್ರಮದಿಂದ ದುಡಿದರು. ಬಳಿಕ ಸ್ವತಂತ್ರವಾಗಿ ಡೈ ಮೇಕಿಂಗ್ ಉದ್ಯಮ ಆರಂಭಿಸಿದರೂ ಆರಂಭಿಕ ಹಂತದಲ್ಲೇ ಹಿನ್ನಡೆ ಅನುಭವಿಸಿದರು. ಆದರೆ ಇದರಿಂದ ಧೃತಿಗೆಡದೆ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯಲ್ಲಿ ಕೆಲಸಕ್ಕೆ ಸೇರಿ ಕೈಗಾರಿಕಾ ಕ್ಷೇತ್ರದ ಅನುಭವವನ್ನು ಗಳಿಸಿದರು.

ಉದ್ಯಮಕ್ಕೆ ಹೊಸ ತಿರುವು
1996ರ ಜೂನ್ 6ರಂದು ವಸಂತಿ ಅವರೊಂದಿಗೆ ವಿವಾಹವಾದ ಬಳಿಕ ಪದ್ಮನಾಭ ಶೇರುಗಾರ್ ಅವರ ಜೀವನದಲ್ಲಿ ಹೊಸ ಅಧ್ಯಾಯ ಆರಂಭವಾಯಿತು. ಪತ್ನಿಯ ಬೆಂಬಲದೊಂದಿಗೆ ಉದ್ಯಮ ಕ್ಷೇತ್ರದಲ್ಲಿ ಹೊಸ ಹೆಜ್ಜೆಯಿಟ್ಟ ಅವರು, 2005ರಲ್ಲಿ ವಸಂತಿ ಪಿ. ಶೇರುಗಾರ್ ಅವರ ಮಾಲೀಕತ್ವದಲ್ಲಿ ‘ವರ್ಷಿಣಿ ಎಂಟರ್ಪ್ರೈಸಸ್’ ಸಂಸ್ಥೆಯನ್ನು ಸ್ಥಾಪಿಸಿದರು. ಪ್ರಸ್ತುತ ಪದ್ಮನಾಭ ಶೇರುಗಾರ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ರಿಫ್ರ್ಯಾಕ್ಟರಿ, ಮೆಕ್ಯಾನಿಕಲ್ ಹಾಗೂ ಸಿವಿಲ್ ನಿರ್ವಹಣೆ, ಪ್ರಾಜೆಕ್ಟ್ ಶಟ್ಡೌನ್ ಚಟುವಟಿಕೆಗಳು ಸೇರಿದಂತೆ ವಿವಿಧ ಕೈಗಾರಿಕಾ ಸೇವೆಗಳನ್ನು ಸಂಸ್ಥೆ ಒದಗಿಸುತ್ತಿದ್ದು, ದೇಶದ ವಿವಿಧ ಭಾಗಗಳಲ್ಲಿ ತನ್ನ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಿದೆ.
ಮೂವರಿಂದ ಆರಂಭವಾಗಿ ಸಾವಿರಾರು ಮಂದಿಗೆ ಉದ್ಯೋಗ
ಕೇವಲ ಮೂವರು ಕಾರ್ಮಿಕರು ಹಾಗೂ ಒಂದೇ ಕಂಪನಿಯೊಂದಿಗೆ ಆರಂಭವಾದ ಉದ್ಯಮ ಇಂದು ದೇಶದ ವಿವಿಧ ಭಾಗಗಳಲ್ಲಿ ತನ್ನ ಸೇವಾ ಜಾಲವನ್ನು ವಿಸ್ತರಿಸಿದೆ. ಸಂಸ್ಥೆಯ ಬೆಳವಣಿಗೆಯೊಂದಿಗೆ ಸಾವಿರಾರು ಮಂದಿಗೆ ಉದ್ಯೋಗ ಹಾಗೂ ಜೀವನೋಪಾಯದ ಅವಕಾಶ ಕಲ್ಪಿಸಿರುವುದು ಪದ್ಮನಾಭ ಶೇರುಗಾರ್ ಅವರ ಪ್ರಮುಖ ಸಾಧನೆಗಳಲ್ಲಿ ಒಂದಾಗಿದೆ.
ಉದ್ಯಮವನ್ನು ಕೇವಲ ಲಾಭದ ದೃಷ್ಟಿಯಿಂದ ನೋಡದೆ ಕಾರ್ಮಿಕರ ಕಲ್ಯಾಣಕ್ಕೂ ಅವರು ಆದ್ಯತೆ ನೀಡಿದ್ದಾರೆ. ಉದ್ಯೋಗಿಗಳಿಗೆ ಇಎಸ್ಐಸಿ, ಇಪಿಎಫ್, ಪಿಟಿ, ಗ್ರ್ಯಾಚ್ಯುಟಿ, ಬೋನಸ್, ಎಲ್ಡಬ್ಲ್ಯೂಪಿ, ಎಲ್ಡಬ್ಲ್ಯೂಎಫ್, ಎಚ್ಆರ್ಎ, ವೈದ್ಯಕೀಯ ಸೌಲಭ್ಯ ಹಾಗೂ ಓವರ್ಟೈಮ್ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ.
ಗುಣಮಟ್ಟದ ಕೆಲಸ, ವೆಚ್ಚ ಕಡಿತ ಹಾಗೂ ನಿಗದಿತ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳಿಸುವಿಕೆಗೆ ಆದ್ಯತೆ ನೀಡುವ ಮೂಲಕ ಕಾಂಟ್ರಾಕ್ಟ್ ಸೇವಾ ಕ್ಷೇತ್ರದಲ್ಲಿ ಸಂಸ್ಥೆ ತನ್ನದೇ ಆದ ಛಾಪು ಮೂಡಿಸಿದೆ.
ಕುಟುಂಬದ ಸಹಕಾರ
ಉದ್ಯಮದ ಬೆಳವಣಿಗೆಯಲ್ಲಿ ಕುಟುಂಬದ ಸದಸ್ಯರೂ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಪುತ್ರ ಯತೀಶ್ ಪಿ. ಶೇರುಗಾರ್ ಸಂಸ್ಥೆಯ ಜಂಟಿ ವ್ಯವಸ್ಥಾಪಕ ನಿರ್ದೇಶಕರಾಗಿ ಹಾಗೂ ಪುತ್ರಿ ವರ್ಷಿಣಿ ಪಿ. ಶೇರುಗಾರ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮತ್ತೊಬ್ಬ ಪುತ್ರಿ ಯೋಗಿನಿ ಪಿ. ಶೇರುಗಾರ್ ವಿವಾಹದ ಬಳಿಕ ಮುಂಬೈನಲ್ಲಿ ನೆಲೆಸಿದ್ದಾರೆ.
ಕುಟುಂಬದ ಒಗ್ಗಟ್ಟು, ಪರಸ್ಪರ ಸಹಕಾರ ಹಾಗೂ ಉದ್ಯಮದ ಮೇಲಿನ ಬದ್ಧತೆ ಸಂಸ್ಥೆಯ ಮತ್ತಷ್ಟು ಬೆಳವಣಿಗೆಗೆ ಬಲ ನೀಡಿದೆ.
ಹಲವು ಪ್ರಶಸ್ತಿಗಳ ಗೌರವ
ಕೈಗಾರಿಕಾ ಕ್ಷೇತ್ರದಲ್ಲಿನ ಸಾಧನೆ, ಗುಣಮಟ್ಟದ ಸೇವೆ ಹಾಗೂ ಸಮಾಜಮುಖಿ ಕಾರ್ಯಗಳನ್ನು ಗುರುತಿಸಿ ಪದ್ಮನಾಭ ಶೇರುಗಾರ್ ಅವರಿಗೆ ಹಲವು ಪ್ರಶಸ್ತಿ-ಪುರಸ್ಕಾರಗಳು ಸಂದಿವೆ. ಸನಾತನ ಫೌಂಡೇಶನ್ ಮತ್ತು ಡಿಸಿಎಕ್ಸ್ ಸಿಸ್ಟಮ್ ಲಿಮಿಟೆಡ್ ವತಿಯಿಂದ ‘ವಿಕ್ರಮ ಪ್ರಶಸ್ತಿ’ ಹಾಗೂ ಜನಪರ ಉದ್ಯಮಶೀಲತೆ ಮತ್ತು ಸಮಾಜಸೇವೆಯನ್ನು ಗುರುತಿಸಿ ‘ಸದ್ಭಾವನಾ ರಾಷ್ಟ್ರೀಯ ಪ್ರಶಸ್ತಿ’ ಸೇರಿದಂತೆ ಹಲವು ಗೌರವಗಳು ಅವರಿಗೆ ಲಭಿಸಿವೆ.
ರಾಷ್ಟ್ರೀಯ ಮಟ್ಟದ ವಿವಿಧ ಪ್ರಶಸ್ತಿ ಹಾಗೂ ಪುರಸ್ಕಾರಗಳ ಮೂಲಕ ಅವರು ಕರ್ನಾಟಕದ ಸಾಧಕರ ಸಾಲಿನಲ್ಲಿ ಗುರುತಿಸಿಕೊಂಡಿದ್ದಾರೆ. ಡಾ. ವಾಮನ್ ರಾವ್ ಬೇಕಲ್ ಸ್ಥಾಪಿಸಿರುವ ಕನ್ನಡ ಭವನದ ರಜತ ಸಂಭ್ರಮ ಸಮ್ಮೇಳನದಲ್ಲಿಯೂ ಅವರಿಗೆ ‘ಉದ್ಯೋಗ ರತ್ನ’ ರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಸೆ.6ರಂದು ‘ಆರ್ಯಭಟ’ ಪ್ರಶಸ್ತಿ ಪ್ರದಾನ
ಕೈಗಾರಿಕಾ ಕ್ಷೇತ್ರಕ್ಕೆ ನೀಡಿದ ಕೊಡುಗೆ, ಉದ್ಯೋಗ ಸೃಷ್ಟಿ ಹಾಗೂ ಸಮಾಜಮುಖಿ ಸೇವೆಯನ್ನು ಪರಿಗಣಿಸಿ ಪದ್ಮನಾಭ ಶೇರುಗಾರ್ ಅವರನ್ನು ‘ಕನ್ನಡಪಯಸ್ವಿನಿ ಉದ್ಯೋಗರತ್ನ’ ಪ್ರಶಸ್ತಿಗೂ ಆಯ್ಕೆ ಮಾಡಲಾಗಿದೆ.
ಇದೀಗ ಸೆಪ್ಟೆಂಬರ್ 6ರಂದು ಬೆಂಗಳೂರಿನಲ್ಲಿ ನಡೆಯಲಿರುವ ಬೃಹತ್ ಕಾರ್ಯಕ್ರಮದಲ್ಲಿ ಕೋತ್ವಾಲ್ ಪದ್ಮನಾಭ ಶೇರುಗಾರ್ ಅವರಿಗೆ ಪ್ರತಿಷ್ಠಿತ ‘ಆರ್ಯಭಟ’ ಪ್ರಶಸ್ತಿ ಪ್ರದಾನವಾಗಲಿದೆ.
ಕಡುಬಡತನದಿಂದ ಆರಂಭವಾದ ಬದುಕು, ಮುಂಬೈನಲ್ಲಿನ ಕಠಿಣ ಪರಿಶ್ರಮ, ಉದ್ಯಮದಲ್ಲಿನ ಹಿನ್ನಡೆ ಹಾಗೂ ನಿರಂತರ ಪ್ರಯತ್ನಗಳ ಮೂಲಕ ಸಾವಿರಾರು ಮಂದಿಗೆ ಉದ್ಯೋಗ ಕಲ್ಪಿಸುವ ಮಟ್ಟಕ್ಕೆ ಬೆಳೆದಿರುವ ಅವರ ಜೀವನಗಾಥೆ, ಕಷ್ಟಗಳನ್ನು ಮೆಟ್ಟಿಲಾಗಿಸಿಕೊಂಡು ಯಶಸ್ಸು ಸಾಧಿಸಬಹುದು ಎಂಬುದಕ್ಕೆ ನಿದರ್ಶನವಾಗಿದೆ.
ಪ್ರತಿಷ್ಠಿತ ‘ಆರ್ಯಭಟ’ ಪ್ರಶಸ್ತಿ ಮತ್ತಷ್ಟು ಸಾಮಾಜಿಕ ಹಾಗೂ ಜನಪರ ಕಾರ್ಯಗಳಿಗೆ ಬೆನ್ನೆಲುಬಾಗಿ ನಿಲ್ಲಲು ಪದ್ಮನಾಭ ಶೇರುಗಾರ್ ಅವರಿಗೆ ಪ್ರೇರಣೆ ನೀಡಲಿ ಎಂದು ಕನ್ನಡ ಭವನದ ಡಾ.ವಾಮನ್ ರಾವ್ ಬೇಕಲ್ ಹಾಗೂ ಸಮಾಜದ ಹಿತಾಕಾಂಕ್ಷಿಗಳು ಹಾರೈಸಿದ್ದಾರೆ.

