ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತರ ಹುದ್ದೆ ಇದೀಗ ರಾಜ್ಯ ರಾಜಕೀಯ ಹಾಗೂ ಪೊಲೀಸ್ ಇಲಾಖೆಯಲ್ಲಿ ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಹಾಲಿ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಅವರನ್ನು ವರ್ಗಾವಣೆ ಮಾಡಿ, ಅವರ ಸ್ಥಾನಕ್ಕೆ ಬೆಳಗಾವಿ ಪೊಲೀಸ್ ಕಮಿಷನರ್ ಭೂಷಣ್ ಬೋರಸೆ ಅವರನ್ನು ನೇಮಕ ಮಾಡಿದ್ದರೂ, ಆದೇಶ ಹೊರಬಂದು ಮೂರು ದಿನ ಕಳೆದರೂ ನೂತನ ಆಯುಕ್ತರು ಅಧಿಕಾರ ಸ್ವೀಕರಿಸದಿರುವುದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಭೂಷಣ್ ಬೋರಸೆ ಅಧಿಕಾರ ಸ್ವೀಕರಿಸದಿರುವುದೇ ಚರ್ಚೆಗೆ ಕಾರಣ
ಸರ್ಕಾರ ಎನ್. ಶಶಿಕುಮಾರ್ ಅವರನ್ನು ಯಾವುದೇ ನಿರ್ದಿಷ್ಟ ಸ್ಥಳ ತೋರಿಸದೆ ವರ್ಗಾವಣೆ ಮಾಡಿ, ಅವರ ಸ್ಥಾನಕ್ಕೆ ಭೂಷಣ್ ಬೋರಸೆ ಅವರನ್ನು ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತರನ್ನಾಗಿ ನೇಮಕ ಮಾಡಿತ್ತು.
ಆದರೆ, ನೇಮಕಾತಿ ಆದೇಶದ ಬಳಿಕವೂ ಬೋರಸೆ ಅವರು ಹುಬ್ಬಳ್ಳಿಗೆ ಆಗಮಿಸಿ ಅಧಿಕಾರ ವಹಿಸಿಕೊಂಡಿಲ್ಲ ಎನ್ನಲಾಗಿದೆ. ಮೂಲಗಳ ಪ್ರಕಾರ, ಬೆಳಗಾವಿಯಲ್ಲೇ ಮುಂದುವರಿಯುವ ಆಸಕ್ತಿಯನ್ನು ಅವರು ಹಿರಿಯ ಅಧಿಕಾರಿಗಳ ಬಳಿ ವ್ಯಕ್ತಪಡಿಸಿದ್ದಾರೆ ಎನ್ನಲಾಗುತ್ತಿದೆ.
ಇದರಿಂದ ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತರ ವರ್ಗಾವಣೆಯ ಹಿಂದೆ ಕೇವಲ ಆಡಳಿತಾತ್ಮಕ ನಿರ್ಧಾರವಷ್ಟೇ ಇದೆಯೇ ಅಥವಾ ರಾಜಕೀಯ ಲೆಕ್ಕಾಚಾರವೂ ಇದೆಯೇ ಎಂಬ ಚರ್ಚೆ ಇದೀಗ ಆರಂಭವಾಗಿದೆ.
ಶಶಿಕುಮಾರ್ ವರ್ಗಾವಣೆ ಹಿಂದೆ ಕಾಂಗ್ರೆಸ್ ಆಂತರಿಕ ರಾಜಕೀಯ?
ಎನ್. ಶಶಿಕುಮಾರ್ ಅವರ ವರ್ಗಾವಣೆಗೆ ಆಡಳಿತಾರೂಢ ಕಾಂಗ್ರೆಸ್ನ ಕೆಲ ನಾಯಕರು ಹಲವು ತಿಂಗಳ ಹಿಂದಿನಿಂದಲೇ ಒತ್ತಡ ಹೇರಿದ್ದರು ಎನ್ನಲಾಗಿದೆ. ಹುಬ್ಬಳ್ಳಿ ಪೂರ್ವ ಕ್ಷೇತ್ರದ ಶಾಸಕ ಪ್ರಸಾದ್ ಅಬ್ಬಯ್ಯ ಸೇರಿದಂತೆ ಕೆಲ ಕಾಂಗ್ರೆಸ್ ನಾಯಕರು ಶಶಿಕುಮಾರ್ ಅವರನ್ನು ವರ್ಗಾವಣೆ ಮಾಡುವಂತೆ ಒತ್ತಾಯಿಸಿದ್ದರು ಎಂಬ ಮಾತುಗಳು ಕೇಳಿಬರುತ್ತಿವೆ.
ಇದೀಗ ವರ್ಗಾವಣೆ ಆದೇಶ ಹೊರಬಂದಿದ್ದರೂ ನೂತನ ಆಯುಕ್ತರು ಅಧಿಕಾರ ಸ್ವೀಕರಿಸದಿರುವುದು ಹೊಸ ರಾಜಕೀಯ ಚರ್ಚೆಗೆ ಕಾರಣವಾಗಿದೆ. ಕಾಂಗ್ರೆಸ್ನ ಮತ್ತೊಂದು ಬಣ ಶಶಿಕುಮಾರ್ ಅವರನ್ನೇ ಹುಬ್ಬಳ್ಳಿ-ಧಾರವಾಡದಲ್ಲಿ ಮುಂದುವರಿಸಲು ಪ್ರಯತ್ನಿಸುತ್ತಿದೆ ಎಂಬ ಮಾತುಗಳೂ ರಾಜಕೀಯ ವಲಯದಲ್ಲಿ ಕೇಳಿಬರುತ್ತಿವೆ. ಆದರೆ, ಈ ಕುರಿತು ಸರ್ಕಾರ ಅಥವಾ ಕಾಂಗ್ರೆಸ್ ಪಕ್ಷದ ಅಧಿಕೃತ ಪ್ರತಿಕ್ರಿಯೆ ಇನ್ನಷ್ಟೇ ಹೊರಬರಬೇಕಿದೆ.
ಐಪಿಎಸ್ ಅಧಿಕಾರಿಗಳಿಗೆ ಹುಬ್ಬಳ್ಳಿ-ಧಾರವಾಡ ಹುದ್ದೆ ‘ಸೂಕ್ಷ್ಮ’ವೇ?
ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತರ ಹುದ್ದೆ ಹಿಂದೆ ಐಪಿಎಸ್ ಅಧಿಕಾರಿಗಳ ನಡುವೆ ಸಾಕಷ್ಟು ಪೈಪೋಟಿ ಸೃಷ್ಟಿಸುತ್ತಿದ್ದ ಪ್ರಮುಖ ಹುದ್ದೆಯಾಗಿತ್ತು. 1989ರಲ್ಲಿ ಸ್ಥಾಪನೆಯಾದ ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತಾಲಯವು 15 ಪೊಲೀಸ್ ಠಾಣೆಗಳು ಹಾಗೂ ನಾಲ್ಕು ಸಂಚಾರಿ ಪೊಲೀಸ್ ಠಾಣೆಗಳನ್ನು ಹೊಂದಿದೆ.
ಅವಳಿ ನಗರದ ಕಾನೂನು ಸುವ್ಯವಸ್ಥೆ ನಿರ್ವಹಣೆ, ರಾಜಕೀಯವಾಗಿ ಸೂಕ್ಷ್ಮ ಪರಿಸ್ಥಿತಿಗಳು ಹಾಗೂ ಸಾರ್ವಜನಿಕ ಒತ್ತಡದ ಹಿನ್ನೆಲೆಯಲ್ಲಿ ಈ ಹುದ್ದೆ ಸವಾಲಿನದ್ದಾಗಿದೆ ಎಂಬ ಅಭಿಪ್ರಾಯ ಅಧಿಕಾರಿಗಳ ವಲಯದಲ್ಲಿದೆ.
ಹಿಂದೆ ಲಾಬುರಾಮ್, ಪಾಂಡುರಂಗ ರಾಣೆ, ಗಗನದೀಪ್ ಹಾಗೂ ರಮಣ ಗುಪ್ತ ಅವರಂತಹ ಹಿರಿಯ ಐಪಿಎಸ್ ಅಧಿಕಾರಿಗಳು ಈ ಹುದ್ದೆಯನ್ನು ನಿರ್ವಹಿಸಿದ್ದರು. ಆದರೆ ಈಗಿನ ಪರಿಸ್ಥಿತಿಯಲ್ಲಿ ಈ ಹುದ್ದೆ ವಹಿಸಿಕೊಳ್ಳುವುದಕ್ಕಿಂತ ಬೇರೆಡೆ ಕಾರ್ಯನಿರ್ವಹಿಸುವುದೇ ‘ಸೇಫ್’ ಎಂಬ ಮನೋಭಾವ ಅಧಿಕಾರಿಗಳಲ್ಲಿ ಮೂಡಿದೆಯೇ ಎಂಬ ಪ್ರಶ್ನೆ ಎದುರಾಗಿದೆ.
ಶಶಿಕುಮಾರ್ ಹೇಳಿದ್ದೇನು?
ತಮ್ಮ ವರ್ಗಾವಣೆಯ ಕುರಿತು ಪ್ರತಿಕ್ರಿಯಿಸಿರುವ ಎನ್. ಶಶಿಕುಮಾರ್ ಅವರು, “ಯಾರು ಹೊಸದಾಗಿ ಬಂದು ಚಾರ್ಜ್ ತಗೊಳ್ತಾರೋ ಅವರಿಗೆ ಅಧಿಕಾರ ಹಸ್ತಾಂತರಿಸಿ ಹೋಗುತ್ತೇನೆ. ಸರ್ಕಾರ ಎಲ್ಲಿ ಹುದ್ದೆ ನೀಡುತ್ತೋ ಅಲ್ಲಿ ಅಧಿಕಾರ ವಹಿಸಿಕೊಳ್ಳುತ್ತೇನೆ” ಎಂದು ಹೇಳಿದ್ದಾರೆ.
ನೂತನ ಆಯುಕ್ತರಾಗಿ ನೇಮಕಗೊಂಡಿರುವ ಭೂಷಣ್ ಬೋರಸೆ ಅವರು ಯಾವಾಗ ಅಧಿಕಾರ ಸ್ವೀಕರಿಸಲಿದ್ದಾರೆ? ಅಥವಾ ವರ್ಗಾವಣೆ ಆದೇಶದಲ್ಲಿ ಮತ್ತೊಂದು ಬದಲಾವಣೆ ನಡೆಯಲಿದೆಯೇ? ಎಂಬುದು ಇದೀಗ ಕುತೂಹಲ ಮೂಡಿಸಿದೆ.
ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತರ ಹುದ್ದೆಯ ಸುತ್ತ ನಡೆಯುತ್ತಿರುವ ಬೆಳವಣಿಗೆಗಳು ಮುಂದಿನ ದಿನಗಳಲ್ಲಿ ಯಾವ ತಿರುವು ಪಡೆಯಲಿವೆ ಎಂಬುದನ್ನು ಕಾದು ನೋಡಬೇಕಿದೆ.

