ಧಾರವಾಡ : ಕಬಡ್ಡಿ, ಖೋ-ಖೋ, ಮಲ್ಲಕಂಬ, ಕುಸ್ತಿ, ಲಗೋರಿ ಸೇರಿದಂತೆ ಎಲ್ಲಾ ಭಾರತೀಯ ಆಟಗಳಲ್ಲಿ ಬದುಕಿನಲ್ಲಿ ಅರಿತು ಮುನ್ನಡೆಯಬೇಕಾದ ಹೃದ್ಯ ಜೀವನಪಾಠಗಳಿವೆ ಎಂದು ಅಮ್ಮಿನಬಾವಿ ಸಂಸ್ಥಾನ ಪಂಚಗೃಹ ಹಿರೇಮಠದ ಶ್ರೀಅಭಿನವ ಶಾಂತಲಿ0ಗ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಅವರು ಬುಧವಾರ ಶಾಲಾ ಶಿಕ್ಷಣ ಇಲಾಖೆಯು ಸುಶಿಲಾತಾಯಿ ಅಜ್ಜಯ್ಯ ಹಿರೇಮಠ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಸಹಯೋಗದಲ್ಲಿ ಸಂಘಟಿಸಿರುವ 2 ದಿನಗಳ ಅಮ್ಮಿನಬಾವಿ ಕ್ಲಸ್ಟರ್ ಮಟ್ಟದ ವಿದ್ಯಾರ್ಥಿ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡುತ್ತಿದ್ದರು. ಪ್ರತೀ ಆಟದ ನಿಯಮಗಳು ಹಾಗೂ ಸ್ಪರ್ಧಾತ್ಮಕ ಕ್ರೀಡಾ ಸಂಗತಿಗಳನ್ನು ಅವಲೋಕನ ಮಾಡಿದಾಗ ಭಾರತೀಯ ಆಟಗಳ ವಿಧಾನಗಳು ಬದುಕಿನ ವಿದ್ಯಮಾನಗಳಲ್ಲಿ ಎಚ್ಚರಿಕೆಯ ಹೆಜ್ಜೆಗಳನ್ನಿಡಲು ಅನೇಕ ಪಾಠಕ್ರಮಗಳನ್ನು ಬೋಧಿಸುತ್ತವೆ ಎಂದರು.

ಲೇಖಕ ಗುರುಮೂರ್ತಿ ಯರಗಂಬಳಿಮಠ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಕೋಶಾಧ್ಯಕ್ಷ ರಾಜಶೇಖರ ಹೊನ್ನಪ್ಪನವರ, ಜಿಲ್ಲಾ ಕಾರ್ಯದರ್ಶಿ ಅಜಿತಕುಮಾರ ದೇಸಾಯಿ, ಜಿಲ್ಲಾ ಕೋಶಾಧ್ಯಕ್ಷ ಶಂಕರ ಘಟ್ಟಿ ಮಾತನಾಡಿದರು. ಖಾದಿ ಕಾರ್ಯಕರ್ತ ಬಿ.ಸಿ.ಕೊಳ್ಳಿ, ದೈಹಿಕ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಪಾಂಡುರ0ಗ ಅಂಕಲಿ, ತಾಲೂಕಾ ಕಾರ್ಯದರ್ಶಿ ಬಸವರಾಜ ಮಡಿವಾಳರ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಘಟಕದ ಆಧ್ಯಕ್ಷ ಕೃಷ್ಣ ಬೋಂಗಾಳೆ, ಕಾರ್ಯದರ್ಶಿ ಎನ್.ಎಸ್. ಕಮ್ಮಾರ, ಪದಾಧಿಕಾರಿಗಳಾದ ಶಿವಲೀಲಾ ಪೂಜಾರ, ಮಹಾದೇವಿ ಸಾಲಿಮಠ, ಮಂಜುಳಾ ದೊಡಮನಿ, ಸಿಆರ್ಪಿ ಗೂಡುಸಾಬ ನದಾಫ್, ವಿವಿಧ ಶಾಲೆಗಳ ಮುಖ್ಯಾಧ್ಯಾಪಕರು ಹಾಗೂ ದೈಹಿಕ ಶಿಕ್ಷಕರು ಇದ್ದರು.

ಇದೇ ಸಂದರ್ಭದಲ್ಲಿ ಸುಶಿಲಾತಾಯಿ ಹಿರೇಮಠ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ವತಿಯಿಂದ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳನ್ನು ಶ್ರೀಅಭಿನವ ಶಾಂತಲಿ0ಗ ಶಿವಾಚಾರ್ಯ ಸ್ವಾಮೀಜಿ ಗೌರವಿಸಿ ಆಶೀರ್ವದಿಸಿದರು.

ಎಂ.ಆಂಜನೇಯ ಸ್ವಾಗತಿಸಿದರು. ಎಂ.ಎನ್.ಆಲದಕಟ್ಟಿ ಹಾಗೂ ಮಹೇಶ್ವರಿ ಹಳ್ಳಿಗೇರಿಮಠ ನಿರೂಪಿಸಿದರು. ಟಿ.ಎಂ.ದೇಸಾಯಿ ವಂದಿಸಿದರು.

