ಸುಳ್ಯ: 2012ರಲ್ಲಿ ದಾಖಲಾಗಿದ್ದ ವಂಚನೆ ಪ್ರಕರಣವೊಂದರಲ್ಲಿ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಉತ್ತರ ಉಪವಿಭಾಗದ ಅಪರಾಧ ಪತ್ತೆ ತಂಡ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದೆ.
2009ರ ಮೇ ತಿಂಗಳಲ್ಲಿ ವಾಹನ ಖರೀದಿಗಾಗಿ ಶ್ರೀರಾಮ್ ಫೈನಾನ್ಸ್ ಸಂಸ್ಥೆಯಿಂದ ₹10 ಲಕ್ಷ ಸಾಲ ಪಡೆದು ಟೆಲ್ಕಾನ್ ಇಎಕ್ಸ್-70 ಮೆಷಿನ್ ವಾಹನವನ್ನು ಖರೀದಿಸಿದ್ದ ಜಾಲ್ಸೂರು ಗ್ರಾಮದ ಶ್ರೀನಿವಾಸ ಬಿ.ಆರ್. (48) ಎಂಬಾತ, ಸಾಲದ ಕಂತುಗಳನ್ನು ಪಾವತಿಸದೆ ಬಾಕಿ ಉಳಿಸಿಕೊಂಡಿದ್ದಾನೆ. ಅಲ್ಲದೆ, ಸಂಸ್ಥೆಯು ವಾಹನ ಪರಿಶೀಲನೆಗಾಗಿ ಹಾಜರುಪಡಿಸುವಂತೆ ಸೂಚಿಸಿದರೂ ವಾಹನವನ್ನು ಹಾಜರುಪಡಿಸದೆ ಸಂಸ್ಥೆಗೆ ವಂಚನೆ ಮಾಡಿರುವ ಆರೋಪದ ಮೇರೆಗೆ ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ಅ.ಕ್ರ. 59/2012ರಂತೆ ಐಪಿಸಿ ಕಲಂ 406, 420, 421 ಜೊತೆಗೆ 34ರ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯವು ಸಿಸಿ ನಂ. 526/2025ರಲ್ಲಿ ಆರೋಪಿಯ ವಿರುದ್ಧ ಜಾಮೀನು ರಹಿತ ವಾರಂಟ್ ಹೊರಡಿಸಿತ್ತು. ಆದರೆ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಶ್ರೀನಿವಾಸ ಬಿ.ಆರ್. ಅವರನ್ನು ಉತ್ತರ ಉಪವಿಭಾಗದ ಅಪರಾಧ ಪತ್ತೆ ತಂಡವು ಸೆಪ್ಟೆಂಬರ್ 2ರಂದು ಜಾಲ್ಸೂರು ಗ್ರಾಮದ ಬೈತಡ್ಕ ಜಂಕ್ಷನ್ನಲ್ಲಿ ವಶಕ್ಕೆ ಪಡೆದುಕೊಂಡು ನ್ಯಾಯಾಲಯಕ್ಕೆ ಹಾಜರುಪಡಿಸಿದೆ.

