ಮಂಗಳೂರು: ಶ್ರೀಲ ಪ್ರಭುಪಾದರ ಇಸ್ಕಾನ್ ಗೋವರ್ಧನ ಹಿಲ್ಸ್ ಮಂಗಳೂರು, ಶ್ರೀ ಶ್ರೀ ಕೃಷ್ಣ ಬಲರಾಮ ಮಂದಿರ ಹಾಗೂ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಸಹಭಾಗಿತ್ವದಲ್ಲಿ ಆಯೋಜಿಸಿರುವ ಶ್ರೀ ಕೃಷ್ಣ ಜನ್ಮಾಷ್ಟಮಿ ಮಹೋತ್ಸವ ಪಿಲಿಕುಳದ ಸೌತ್ ಭವನದಲ್ಲಿ ಅದ್ಧೂರಿಯಾಗಿ ನಡೆಯುತ್ತಿದೆ.
ಇಂದು ಮತ್ತು ನಾಳೆ ನಡೆಯಲಿರುವ ಈ ಧಾರ್ಮಿಕ ಹಾಗೂ ಸಾಂಸ್ಕೃತಿಕ ಮಹೋತ್ಸವದಲ್ಲಿ ಸಹಸ್ರಾರು ಭಕ್ತರು ಭಾಗವಹಿಸಿ ‘ಹರೇ ಕೃಷ್ಣ, ಹರೇ ಕೃಷ್ಣ’ ನಾಮಜಪದಲ್ಲಿ ತೊಡಗಿದ್ದಾರೆ.
ಮಹೋತ್ಸವದಲ್ಲಿ ಶ್ರೀ ಶ್ರೀ ಕೃಷ್ಣ ಬಲರಾಮರ ಮಂಗಳಾರತಿ, ಶೃಂಗಾರಾರತಿ, ಪುಷ್ಪಾಂಜಲಿ ಸೇವೆ, ತೊಟ್ಟಿಲು ಸೇವೆ, ಅಭಿಷೇಕ, ಹೋಮ ಹಾಗೂ ಮಹಾಮಂಗಳಾರತಿ ಸೇರಿದಂತೆ ವಿವಿಧ ಧಾರ್ಮಿಕ ಸೇವೆಗಳನ್ನು ಆಯೋಜಿಸಲಾಗಿದೆ.

ಭಕ್ತರಿಗೆ ಆಧ್ಯಾತ್ಮಿಕ ಅನುಭೂತಿಯ ಜೊತೆಗೆ ಸಾಂಸ್ಕೃತಿಕ ಕಲಾ ವೈಭವದ ಸವಿಯನ್ನೂ ನೀಡಲಾಗುತ್ತಿದೆ. ಆಳ್ವಾಸ್ ಸಾಂಸ್ಕೃತಿಕ ಕಾರ್ಯಕ್ರಮ, ಅಂತಾರಾಷ್ಟ್ರೀಯ ಭಜನಾ ಕಾರ್ಯಕ್ರಮ ಹಾಗೂ ‘ಶ್ರೀ ಕೃಷ್ಣ ವೈಭವ’ ಸಾಂಸ್ಕೃತಿಕ ಕಾರ್ಯಕ್ರಮಗಳು ಗಮನ ಸೆಳೆಯುತ್ತಿವೆ.
ಶ್ರೀ ಕೃಷ್ಣ ಜನ್ಮಾಷ್ಟಮಿ ಅಭಿಷೇಕ ಹಾಗೂ ಭವ್ಯ ಮಹಾಭಿಷೇಕ ಕಾರ್ಯಕ್ರಮಗಳು ಭಕ್ತಿಭಾವವನ್ನು ಮತ್ತಷ್ಟು ಹೆಚ್ಚಿಸಿವೆ.
ಮಕ್ಕಳಿಗಾಗಿ ವಿಶೇಷ ಕಾರ್ಯಕ್ರಮಗಳ ಜೊತೆಗೆ ಆಹಾರ ಮಳಿಗೆ, ಉಡುಗೊರೆ ಕೇಂದ್ರ ಹಾಗೂ ಸಾವಯವ ಉತ್ಪನ್ನಗಳ ಮಳಿಗೆಗಳನ್ನೂ ಆಯೋಜಿಸಲಾಗಿದೆ.

