ಕಾಸರಗೋಡು : ಡಾ.ವಾಣಿಶ್ರೀ ಕಾಸರಗೋಡು ಸಾರಥ್ಯದ ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಘ (ರಿ) ಕಾಸರಗೋಡು ಇವರ 245ನೇ ಕಾರ್ಯಕ್ರಮವಾಗಿ 31 ಆಗಸ್ಟ್ 2026 ಸೋಮವಾರ ಪ್ರಕೃತಿ ಆಯುರ್ವೇದ ಚಿಕಿತ್ಸಾಲಯ ಶ್ರೀ ಗಿರಿ ಸದನದ ಶಿವದುರ್ಗಾ ವೇದಿಕೆ, ಚೂರಿಪ್ಪಳ್ಳ ನೆಲ್ಲಿಕಟ್ಟೆ ಇಲ್ಲಿ “ಹನಿಗವನ ಉತ್ಸವ” ಹಾಗೂ ಸಾಹಿತ್ಯ ಗಾನ ನೃತ್ಯ ವೈಭವ ಎಂಬ ವಿನೂತನ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿದ ಡಾ. ವೆಂಕಟಗಿರೀಶ್ ಹನಿಗವನಗಳು ಪ್ರಸ್ತುತ ದಿನಗಳಲ್ಲಿ ಸಮಾಜದ ಅಂಕು ಡೊಂಕುಗಳನ್ನು ತಿದ್ದುವ ಮಹತ್ತರ ಸಾಹಿತ್ಯ ಪ್ರಾಕಾರಗಳು ಎಂದು ಬಣ್ಣಿಸಿದರು.
ಸಂಘದ ಅಧ್ಯಕ್ಷರಾದ ಡಾ.ವಾಣಿಶ್ರೀ ಕಾಸರಗೋಡು ತಾವೇ ಬರೆದಿರುವ ಹನಿಗವನ ಹೊತ್ತಿಗೆ “ಪ್ರಕೃತಿ”ಯನ್ನು ಸಭೆಗೆ ಪರಿಚಯಿಸಿ ಹನಿಗವನಗಳನ್ನು ವಾಚಿಸಿ ಹನಿಗವನಗಳು 3-5 ಸಾಲುಗಳುಳ್ಳ ಕವನಗಳು ಸಾಹಿತ್ಯ ಕಿರಿದಾದರೂ ಆಳವಾದ ಅರ್ಥವನ್ನು ಕೊಡುವುದರ ಜೊತೆಗೆ ಓದುಗರನ್ನು ಸುಲಭವಾಗಿ ತಲುಪುವ ಮಾಧ್ಯಮ ಎಂದು ತಿಳಿಸಿಕೊಟ್ಟರು. ಶ್ರೀಮತಿ ಸುಚಿತ್ರ ಪ್ರಕೃತಿ ಪುಸ್ತಕದ ಹನಿಗವನಗಳಿಗೆ ಧ್ವನಿಯಾದರು.
ಸಂಘದ ಉಪಾಧ್ಯಕ್ಷರಾದ ಶ್ರೀ ಅಚ್ಚುತ ಭಟ್ ಕಾರ್ಯಕ್ರಮಕ್ಕೆ ಪೂರ್ಣ ಸಹಕಾರ ನೀಡಿದರು. ಕಾರ್ಯದರ್ಶಿ ಶ್ರೀ ಸುರೇಶ್ ಉಡುಪಿ ಕಾರ್ಯಕ್ರಮದ ಚೌಕಟ್ಟು ಸಿದ್ಧಪಡಿಸಿ ಮಾರ್ಗದರ್ಶನ ನೀಡಿದರು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಡಾ.ವಾಣಿಶ್ರೀ ಕಾಸರಗೋಡು, ಭವಿತ್,ಅಹಿಷ್ ಲಕ್ಷ್ಮೀಶ್ ಹರ್ಷಿಶ್ ಇವರಿಂದ ಕಲಾಕಾರ್ಯಕ್ರಮ ನಡೆದು ಜನಮಾನಸ ಸೂರೆಗೊಂಡಿತು. ಕಲಾವಿದರಿಗೆ ಪುಸ್ತಕಗಳನ್ನು ನೀಡಿ ಗೌರವಿಸಲಾಯಿತು.


