ಮುಂಬೈ, ಸೆಪ್ಟೆಂಬರ್ 4: ಮಹಾರಾಷ್ಟ್ರದಲ್ಲಿ ನವರಾತ್ರಿ ಉತ್ಸವದ ಹಿನ್ನೆಲೆಯಲ್ಲಿ ವಿಶ್ವ ಹಿಂದೂ ಪರಿಷತ್ (ವಿಎಚ್ಪಿ) ಕಠಿಣ ಮಾರ್ಗಸೂಚಿಗಳನ್ನು ಪ್ರಕಟಿಸಿದ್ದು, ಗರ್ಭಾ ಮತ್ತು ದಾಂಡಿಯಾ ಕಾರ್ಯಕ್ರಮಗಳಲ್ಲಿ ಭಾಗವಹಿಸುವವರ ಗುರುತಿನ ಪರಿಶೀಲನೆಗೆ ಒತ್ತು ನೀಡಿದೆ. ಈ ಕ್ರಮ ಇದೀಗ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.
ಗರ್ಭಾ ಕಾರ್ಯಕ್ರಮಗಳ ಪ್ರವೇಶ ದ್ವಾರದಲ್ಲೇ ಆಧಾರ್ ಕಾರ್ಡ್ ಪರಿಶೀಲನೆ ನಡೆಸಬೇಕು ಹಾಗೂ ಭಾಗವಹಿಸುವವರ ಹಣೆಗೆ ತಿಲಕ ಇಡುವ ವ್ಯವಸ್ಥೆ ಮಾಡಬೇಕು ಎಂದು ವಿಎಚ್ಪಿ ಆಯೋಜಕರಿಗೆ ಸೂಚಿಸಿದೆ ಎನ್ನಲಾಗಿದೆ. ಮುಸ್ಲಿಂ ಸಮುದಾಯದವರ ಪ್ರವೇಶಕ್ಕೆ ನಿರ್ಬಂಧ ವಿಧಿಸುವಂತೆಯೂ ಸಂಘಟನೆ ಸೂಚಿಸಿರುವುದು ವಿವಾದಕ್ಕೆ ಕಾರಣವಾಗಿದೆ.

‘ಲವ್ ಜಿಹಾದ್’ ಪ್ರಕರಣಗಳನ್ನು ತಡೆಯುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ವಿಎಚ್ಪಿ ಹಾಗೂ ಬಜರಂಗದಳದ ಮುಖಂಡರು ತಿಳಿಸಿದ್ದಾರೆ. ಗರ್ಭಾ ಮೈದಾನಗಳಿಗೆ ಯುವಕರು ನಕಲಿ ಹೆಸರುಗಳಲ್ಲಿ ಪ್ರವೇಶಿಸಿ ಹಿಂದೂ ಯುವತಿಯರನ್ನು ವಂಚಿಸುವ ಸಾಧ್ಯತೆ ಇದೆ ಎಂಬ ಆರೋಪವನ್ನು ಸಂಘಟನೆ ಮುಂದಿಟ್ಟಿದೆ.
ಈ ನಡುವೆ, ಆರ್ಎಸ್ಎಸ್ ಸರಸಂಘಚಾಲಕ ಮೋಹನ್ ಭಾಗವತ್ ಅವರ ಇತ್ತೀಚಿನ ಏಕತೆ ಮತ್ತು ಸಹಬಾಳ್ವೆಯ ಕುರಿತ ಹೇಳಿಕೆಗಳ ಹಿನ್ನೆಲೆಯಲ್ಲಿ ವಿಎಚ್ಪಿಯ ಮಾರ್ಗಸೂಚಿ ಮತ್ತಷ್ಟು ಚರ್ಚೆಗೆ ಗ್ರಾಸವಾಗಿದೆ. ಎಲ್ಲಾ ಸಮುದಾಯಗಳ ನಡುವೆ ಸೌಹಾರ್ದತೆ ಮತ್ತು ಸಹಬಾಳ್ವೆಗೆ ಒತ್ತು ನೀಡಿರುವ ಭಾಗವತ್ ಅವರ ನಿಲುವಿಗೆ ಈ ಕ್ರಮ ವಿರುದ್ಧವಾಗಿದೆ ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ.

ವಿಎಚ್ಪಿ ಮುಖಂಡ ಶ್ರೀರಾಜ್ ನಾಯರ್ ಪ್ರತಿಕ್ರಿಯಿಸಿ, ಸಂಘಟನೆ ಯಾರ ವಿರುದ್ಧವೂ ಇಲ್ಲ ಮತ್ತು ಸಾಮಾಜಿಕ ಸೌಹಾರ್ದತೆಯನ್ನು ನಂಬುತ್ತದೆ ಎಂದು ಹೇಳಿದ್ದಾರೆ. ಆದರೆ, ತಮ್ಮ ಧಾರ್ಮಿಕ ಹಾಗೂ ಸಾಂಸ್ಕೃತಿಕ ನಂಬಿಕೆಗಳನ್ನು ರಕ್ಷಿಸುವ ನಿಟ್ಟಿನಲ್ಲಿ ಮಾರ್ಗಸೂಚಿಗಳನ್ನು ಸಡಿಲಿಸಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.
ವಿಎಚ್ಪಿಯ ಈ ನಿರ್ಧಾರಕ್ಕೆ ಮಹಾರಾಷ್ಟ್ರದ ವಿರೋಧ ಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸಿವೆ. ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಧರ್ಮದ ಆಧಾರದ ಮೇಲೆ ಪ್ರವೇಶ ನಿರ್ಬಂಧಿಸುವುದು ಸಂವಿಧಾನಾತ್ಮಕ ಸಮಾನತೆಯ ಹಕ್ಕಿಗೆ ವಿರುದ್ಧವಾಗಿದೆ ಎಂದು ಕಾಂಗ್ರೆಸ್ ಹಾಗೂ ಎನ್ಸಿಪಿ (ಶರದ್ ಪವಾರ್ ಬಣ) ನಾಯಕರು ಆರೋಪಿಸಿದ್ದಾರೆ. ಈ ಕ್ರಮವು ಸಮಾಜದಲ್ಲಿ ಧ್ರುವೀಕರಣಕ್ಕೆ ಕಾರಣವಾಗಬಹುದು ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

