ಮೈಸೂರು: ದೇಶಾದ್ಯಂತ ಶ್ರೀಕೃಷ್ಣ ಜನ್ಮಾಷ್ಟಮಿ ಸಂಭ್ರಮ ಮನೆಮಾಡಿರುವ ಬೆನ್ನಲ್ಲೇ, ಸಾಂಸ್ಕೃತಿಕ ನಗರಿ ಮೈಸೂರಿನ ಕೃಷ್ಣರಾಜ ಪೊಲೀಸ್ ಠಾಣೆಯಲ್ಲೂ ಹಬ್ಬವನ್ನು ಸಡಗರದಿಂದ ಆಚರಿಸಲಾಯಿತು.
ಸಾರ್ವಜನಿಕರ ಸೇವೆ, ಕಾನೂನು ಸುವ್ಯವಸ್ಥೆ ಹಾಗೂ ನಿರಂತರ ಕರ್ತವ್ಯದ ಒತ್ತಡದ ನಡುವೆಯೂ ಪೊಲೀಸರು ತಮ್ಮ ಕರ್ತವ್ಯದ ಜಂಜಾಟವನ್ನು ಬದಿಗಿಟ್ಟು ಸಹೋದ್ಯೋಗಿಗಳೊಂದಿಗೆ ಕೃಷ್ಣಾಷ್ಟಮಿ ಸಂಭ್ರಮದಲ್ಲಿ ಪಾಲ್ಗೊಂಡರು.

ಹಬ್ಬದ ಅಂಗವಾಗಿ ಪೊಲೀಸ್ ಠಾಣೆಯ ಆವರಣವನ್ನು ಮಾವಿನ ಎಲೆಗಳ ತೋರಣ ಹಾಗೂ ವಿವಿಧ ಬಣ್ಣಗಳ ಹೂವುಗಳಿಂದ ಸುಂದರವಾಗಿ ಅಲಂಕರಿಸಲಾಗಿತ್ತು. ಠಾಣೆಯೊಳಗೆ ಶ್ರೀಕೃಷ್ಣನ ವಿಗ್ರಹಕ್ಕೆ ವಿಶೇಷ ಪೂಜೆ ಸಲ್ಲಿಸಲಾಯಿತು. ಹಿರಿಯ ಅಧಿಕಾರಿಗಳು, ಪೊಲೀಸ್ ಸಿಬ್ಬಂದಿ ಹಾಗೂ ಸ್ಥಳೀಯರು ಕಾರ್ಯಕ್ರಮದಲ್ಲಿ ಭಾಗವಹಿಸಿ ಹಬ್ಬದ ಸಂಭ್ರಮ ಹಂಚಿಕೊಂಡರು.

ಆಚರಣೆಯ ಪ್ರಮುಖ ಆಕರ್ಷಣೆಯಾಗಿದ್ದು ಪುಟ್ಟ ಬಾಲಕನೊಬ್ಬನ ಮುದ್ದು ಕೃಷ್ಣನ ವೇಷ. ತಲೆಯ ಮೇಲೆ ನವಿಲು ಗರಿ, ಕೈಯಲ್ಲಿ ಕೊಳಲು ಹಿಡಿದು ಠಾಣೆಯ ಆವರಣದಲ್ಲಿ ಓಡಾಡಿದ ಬಾಲಕ ಎಲ್ಲರ ಗಮನ ಸೆಳೆದನು. ಆತನಿಗೆ ಪೊಲೀಸರು ಆರತಿ ಬೆಳಗಿ, ಸಂಭ್ರಮದಿಂದ ಹಬ್ಬ ಆಚರಿಸಿದರು.

ಸಾಮಾನ್ಯವಾಗಿ ಗಂಭೀರ ವಾತಾವರಣದಿಂದ ಕೂಡಿರುವ ಪೊಲೀಸ್ ಠಾಣೆ ಕೃಷ್ಣಾಷ್ಟಮಿ ಹಿನ್ನೆಲೆಯಲ್ಲಿ ಹಬ್ಬದ ಸೊಬಗಿನಿಂದ ಕಂಗೊಳಿಸಿತು. ಸಮಾಜದ ಶಾಂತಿ ಮತ್ತು ಸುರಕ್ಷತೆಗಾಗಿ ಹಗಲಿರುಳು ಶ್ರಮಿಸುವ ಖಾಕಿ ಪಡೆ, ಹಬ್ಬದ ಮೂಲಕ ತಮ್ಮ ನಡುವಿನ ಒಗ್ಗಟ್ಟನ್ನು ಮತ್ತಷ್ಟು ಬಲಪಡಿಸುವುದರ ಜೊತೆಗೆ ಸಾರ್ವಜನಿಕರೊಂದಿಗೆ ಸಂತಸದ ಕ್ಷಣಗಳನ್ನು ಹಂಚಿಕೊಂಡಿದ್ದು ವಿಶೇಷವಾಗಿತ್ತು

