ಮಂಗಳೂರು: ಪರಿಸರ ಸಂರಕ್ಷಣೆ ಕಾಯ್ದೆ–1986ರ ಸೆಕ್ಷನ್ 15ಕ್ಕೆ ತಿದ್ದುಪಡಿ ತಂದ ಬಳಿಕ ಪರಿಸರ ಉಲ್ಲಂಘನೆ ಪ್ರಕರಣಗಳಲ್ಲಿ ದಂಡ ವಸೂಲಾತಿಯಲ್ಲಿ ಭಾರಿ ಲೋಪಗಳು ನಡೆದಿದ್ದು, ಕಳೆದ ಮೂರು ವರ್ಷಗಳಲ್ಲಿ ಸರ್ಕಾರಕ್ಕೆ ಅಂದಾಜು ₹1,200 ಕೋಟಿ ನಷ್ಟವಾಗಿದೆ ಎಂದು ದಕ್ಷಿಣ ಕನ್ನಡ ಅರಣ್ಯ, ಪರಿಸರ ಮತ್ತು ಹವಾಮಾನ ಬದಲಾವಣೆ ಸಂಘದ ಕಾರ್ಯದರ್ಶಿ ಬೆನೆಡಿಕ್ಟ್ ಸಿ. ಫೆರ್ನಾಂಡೀಸ್ ಆರೋಪಿಸಿದ್ದಾರೆ.
ನಗರದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಯ್ದೆಗೆ ತಿದ್ದುಪಡಿ ಮಾಡಿದ ಬಳಿಕ ಪರಿಸರ ಉಲ್ಲಂಘನೆಗಳಿಗೆ ₹10 ಸಾವಿರದಿಂದ ₹15 ಲಕ್ಷದವರೆಗೆ ದಂಡ ವಿಧಿಸುವ ವ್ಯವಸ್ಥೆ ಜಾರಿಯಲ್ಲಿದೆ ಎಂದು ತಿಳಿಸಿದರು.

ಕರ್ನಾಟಕದಲ್ಲಿ ಸುಮಾರು 4.73 ಲಕ್ಷ ಪರಿಸರ ಉಲ್ಲಂಘನೆ ಪ್ರಕರಣಗಳು ದಾಖಲಾಗಿದ್ದು, ಕನಿಷ್ಠ ದಂಡದ ಲೆಕ್ಕಾಚಾರದಲ್ಲಿಯೇ ಸುಮಾರು ₹474 ಕೋಟಿ ಸಂಗ್ರಹವಾಗಬೇಕಿತ್ತು. ಆದರೆ ಕೇವಲ ₹79 ಕೋಟಿ ಮಾತ್ರ ವಸೂಲಾಗಿದ್ದು, 2024–25ನೇ ಸಾಲಿನಲ್ಲೇ ಸುಮಾರು ₹395 ಕೋಟಿ ನಷ್ಟವಾಗಿದೆ ಎಂದು ಅವರು ದೂರಿದರು.
ಸ್ಥಳೀಯ ಸಂಸ್ಥೆಗಳಿಗೆ ದಂಡ ವಿಧಿಸುವ ಅಧಿಕಾರವಿಲ್ಲದಿದ್ದರೂ, ಕೆಲವು ಕಡೆಗಳಲ್ಲಿ ₹500 ಹಾಗೂ ₹1,000 ದಂಡ ವಿಧಿಸಿರುವ ಪ್ರಕರಣಗಳು ಕಂಡುಬಂದಿವೆ ಎಂದು ಆರೋಪಿಸಿದರು. ನಿಯಮಾನುಸಾರ ವಸೂಲಾಗಬೇಕಿದ್ದ ದಂಡದ ಮೊತ್ತದಲ್ಲಿ ಉಂಟಾಗಿರುವ ಕೊರತೆಯನ್ನು ಸಂಬಂಧಪಟ್ಟ ಅಧಿಕಾರಿಗಳಿಂದಲೇ ವಸೂಲಿ ಮಾಡಬೇಕು ಎಂದು ಸಂಘ ಒತ್ತಾಯಿಸಿದೆ.
ಈ ಕುರಿತು ರಾಜ್ಯ ಹಾಗೂ ಕೇಂದ್ರ ಸರ್ಕಾರದ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ ಎಂದು ಬೆನೆಡಿಕ್ಟ್ ಸಿ. ಫೆರ್ನಾಂಡೀಸ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಅಧ್ಯಕ್ಷ ಚಾರ್ಲ್ಸ್ ಅನಿಲ್ ಡಿಸೋಜ, ಪ್ರಮುಖರಾದ ಮಹಮ್ಮದ್ ನಿಹಾಲ್ ಹಾಗೂ ಅಶ್ವಿನಿ ಕೆ.ಭಟ್ ಉಪಸ್ಥಿತರಿದ್ದರು

