ಉಡುಪಿ : ಉಡುಪಿ ಶ್ರೀಕೃಷ್ಣ ಮಠದಲ್ಲಿ ನಡೆದ ವಿಟ್ಲಪಿಂಡಿ ಉತ್ಸವದ ವೇಳೆ ಅನಿರೀಕ್ಷಿತ ಘಟನೆಯೊಂದು ಸಂಭವಿಸಿದ್ದು, ಕೆಲಕಾಲ ಭಕ್ತರಲ್ಲಿ ಆತಂಕದ ವಾತಾವರಣ ನಿರ್ಮಾಣವಾಯಿತು.
ವಿಟ್ಲಪಿಂಡಿ ಉತ್ಸವದ ಕೊನೆಯ ಹಂತದಲ್ಲಿ ಶ್ರೀಕೃಷ್ಣನ ಮಣ್ಣಿನ ಮೂರ್ತಿಯೊಂದು (ಮೃಣ್ಮಯ ಮೂರ್ತಿ ) ಆಕಸ್ಮಿಕವಾಗಿ ಕೈಯಿಂದ ಜಾರಿ ಕೆಳಗೆ ಬಿದ್ದು ಭಗ್ನಗೊಂಡ ಘಟನೆ ನಡೆದಿದೆ.
ಚಾತುರ್ಮಾಸ್ಯದ ಅಂಗವಾಗಿ ಉಡುಪಿ ಶ್ರೀಕೃಷ್ಣ ಮಠದಲ್ಲಿ ಪ್ರತಿಷ್ಠಾಪಿಸಲಾಗಿದ್ದ ಕೃಷ್ಣನ ಮಣ್ಣಿನ ಮೂರ್ತಿಯನ್ನು ಚಿನ್ನದ ರಥದಲ್ಲಿ ರಥಾರೂಢಗೊಳಿಸಿ ರಥಬೀದಿಯಲ್ಲಿ ಭವ್ಯ ಮೆರವಣಿಗೆ ನಡೆಸಲಾಗಿತ್ತು.
ರಥೋತ್ಸವ ಮುಕ್ತಾಯಗೊಂಡ ಬಳಿಕ ಸಂಪ್ರದಾಯದಂತೆ ಮಣ್ಣಿನ ಮೂರ್ತಿಯನ್ನು ರಥದಿಂದ ಇಳಿಸಿ ಮಧ್ವ ಸರೋವರದಲ್ಲಿ ವಿಸರ್ಜನೆಗಾಗಿ ಕೊಂಡೊಯ್ಯಲಾಗುತ್ತಿತ್ತು. ಈ ವೇಳೆ ಪರ್ಯಾಯ ಶಿರೂರು ಮಠದ ಶ್ರೀ ವೇದವರ್ಧನತೀರ್ಥ ಸ್ವಾಮೀಜಿಯವರ ಕೈಯಿಂದ ರಥಾರೂಢವಾಗಿದ್ದ ಕೃಷ್ಣನ ಮಣ್ಣಿನ ಉತ್ಸವ ಮೂರ್ತಿ ಆಕಸ್ಮಿಕವಾಗಿ ಕೆಳಗೆ ಬಿದ್ದಿದೆ. ಈ ವೇಳೆ ಮೂರ್ತಿ ಅನಿರೀಕ್ಷಿತವಾಗಿ ಕೈಯಿಂದ ಜಾರಿ ಕೆಳಗೆ ಬಿದ್ದ ರಭಸಕ್ಕೆ ಮೂರ್ತಿ ಸಂಪೂರ್ಣ ಭಗ್ನಗೊಂಡಿದೆ.
ಉತ್ಸವದ ಪ್ರಮುಖ ಘಟ್ಟದಲ್ಲಿ ನಡೆದ ಈ ಘಟನೆಯಿಂದ ಭಕ್ತರಲ್ಲಿ ಆತಂಕ ಮತ್ತು ಆಶ್ಚರ್ಯ ಉಂಟಾಗಿದೆ .ಘಟನೆ ಕಂಡ ಸ್ಥಳದಲ್ಲಿದ್ದ ಭಕ್ತರು ಕೆಲಕಾಲ ಆತಂಕಕ್ಕೊಳಗಾದರು.

