ದುಬೈ, : ದುಬೈ ಪದ್ಮಶಾಲಿ ಸಮುದಾಯದ ವತಿಯಿಂದ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆಯನ್ನು ಭಕ್ತಿ, ಸಡಗರ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಆಚರಿಸಲಾಯಿತು.
ನಗರದ ಫಾರ್ಚೂನ್ ಪ್ಲಾಜಾ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪದ್ಮಶಾಲಿ ಸಮುದಾಯದ ಸದಸ್ಯರು, ಮಕ್ಕಳು ಹಾಗೂ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡರು. ಬೆಳಿಗ್ಗೆ 9 ಗಂಟೆಗೆ ಪೂಜಾ ವಿಧಿವಿಧಾನಗಳೊಂದಿಗೆ ಆರಂಭಗೊಂಡಿತು. ಬಳಿಕ ಸಂಘದ ಭಜನಾ ಮಂಡಳಿಯಿಂದ ಭಜನೆ ಹಾಗೂ ಕೀರ್ತನೆಗಳು ನಡೆದವು.

ಕಾರ್ಯಕ್ರಮದ ಅಂಗವಾಗಿ ಪ್ರವಚನ ಗುರು ಶ್ರೀ ಭಗವಾನ್ ಗೋವಿಂದ ದಾಸ್ ಪ್ರಭು ಅವರು “Beyond the Universe: Discovering Krishna, the Supreme” ವಿಷಯದ ಕುರಿತು ಪ್ರವಚನ ನೀಡಿದರು. ಭೌತಿಕ ಜಗತ್ತಿನ ಆಚೆ ಇರುವ ಶಾಶ್ವತ ಆಧ್ಯಾತ್ಮಿಕ ಸತ್ಯ,ಜೀವನದ ಉದ್ದೇಶ ಹಾಗೂ ಶ್ರೀಕೃಷ್ಣನನ್ನು ಅರಿತು ಆಧ್ಯಾತ್ಮಿಕವಾಗಿ ಅವರೊಂದಿಗೆ ಸಂಪರ್ಕ ಬೆಳೆಸುವ ಮಹತ್ವವನ್ನು ಅವರು ವಿವರಿಸಿದರು.
ಅಧ್ಯಕ್ಷರಾದ ರಘುರಾಮ್ ಶೆಟ್ಟಿಗಾರ್ ಹಾಗೂ ಶ್ರೀಮತಿ ಸೀಮಾ ದಂಪತಿಗಳು ಶ್ರೀ ಭಗವಾನ್ ಗೋವಿಂದ ದಾಸ್ ಪ್ರಭು ಹಾಗೂ ಅವರ ಧರ್ಮಪತ್ನಿಯನ್ನು ಸನ್ಮಾನಿಸಿದರು. ರಘುರಾಮ್ ಶೆಟ್ಟಿಗಾರ್ ಅವರು ಮಾತನಾಡುತ್ತಾ ಜನ್ಮಾಷ್ಟಮಿ ಆಚರಣೆಯಲ್ಲಿ ಪದ್ಮಶಾಲಿ ಸಮುದಾಯದ ಸದಸ್ಯರು ತೋರಿದ ಉತ್ತಮ ಸ್ಪಂದನೆ ಹಾಗೂ ಸಕ್ರಿಯ ಪಾಲ್ಗೊಳ್ಳುವಿಕೆಯನ್ನು ಶ್ಲಾಘಿಸಿದರು. ಸಮುದಾಯದ ಸದಸ್ಯರ ಸಹಕಾರ ಹಾಗೂ ಒಗ್ಗಟ್ಟು ಕಾರ್ಯಕ್ರಮದ ಯಶಸ್ಸಿಗೆ ಪ್ರಮುಖ ಕಾರಣವಾಗಿದೆ ಎಂದರು. ಸನಾತನ ಧರ್ಮದ ವಿವಿಧ ಶಾಸ್ತ್ರಗಳಲ್ಲಿ ಅಡಕವಾಗಿರುವ ಜ್ಞಾನ ಹಾಗೂ ವಿಚಾರಧಾರೆಗಳ ಕುರಿತು ಮಾತನಾಡಿದ ಅವರು, ಅವುಗಳಲ್ಲಿನ ಹಲವು ಅಂಶಗಳು ಆಧುನಿಕ ವೈಜ್ಞಾನಿಕ ಸಂಶೋಧನೆಗಳೊಂದಿಗೆ ಹೊಂದಾಣಿಕೆ ಹೊಂದಿರುವುದನ್ನು ವಿವರಿಸಿದರು.ಮಧ್ಯಪ್ರಾಚ್ಯದ ಪ್ರಸ್ತುತ ಪರಿಸ್ಥಿತಿಗಳ ಹಿನ್ನೆಲೆಯಲ್ಲಿ ಈ ಹಿಂದೆ ಯೋಜಿಸಲಾಗಿದ್ದ ಕೆಲವು ಕಾರ್ಯಕ್ರಮಗಳನ್ನು ನಡೆಸಲು ಸಾಧ್ಯವಾಗದಿರುವುದನ್ನು ತಿಳಿಸಿದ ಅವರು,ಮುಂದಿನ ದಿನಗಳಲ್ಲಿ ಆಯೋಜಿಸಲಾಗಿರುವ ಕಾರ್ಯಕ್ರಮಗಳ ವಿವರಗಳನ್ನು ಹಂಚಿಕೊಂಡರು. ಭಗವದ್ಗೀತೆಯನ್ನು ಪ್ರತಿಯೊಬ್ಬರೂ ಓದಿ,ಅದರಲ್ಲಿರುವ ಶ್ರೀಕೃಷ್ಣನ ಜೀವನ ಸಂದೇಶ ಹಾಗೂ ಧರ್ಮಬದ್ಧ ಮತ್ತು ಅರ್ಥಪೂರ್ಣ ಜೀವನ ನಡೆಸುವ ಬೋಧನೆಗಳನ್ನು ಅರ್ಥೈಸಿಕೊಳ್ಳಬೇಕು ಎಂದು ಅವರು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಮಕ್ಕಳು ಶ್ರೀಕೃಷ್ಣ ಹಾಗೂ ರಾಧೆಯ ವೇಷಧಾರಣೆ ಮಾಡಿ ಗಮನ ಸೆಳೆದರು. ನೃತ್ಯ,ಸಂಗೀತ ಹಾಗೂ ಭಗವದ್ಗೀತೆಯ ಶ್ಲೋಕ ಪಠಣ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ನಂದೋತ್ಸವ ಪ್ರಮುಖ ಆಕರ್ಷಣೆ
ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿದ್ದ ನಂದೋತ್ಸವದಲ್ಲಿ,ಸುಹಾಸ್ ಉಡುಪಿ ಹಾಗೂ ಶ್ರೀಮತಿ ಲಲಿತಾ ದಂಪತಿಗಳು ನಂದಮಹಾರಾಜ ಹಾಗೂ ಯಶೋದಾ ಮಾತೆಯ ಪಾತ್ರಗಳಲ್ಲಿ ಕಾಣಿಸಿಕೊಂಡರು. ಬಾಲಕೃಷ್ಣನ ಜನನದ ಸಂಭ್ರಮವನ್ನು ಪ್ರತಿಬಿಂಬಿಸುವ ನಂದೋತ್ಸವವು ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿತು. ಭಕ್ತರು ಹಾಗೂ ಸಮುದಾಯದ ಸದಸ್ಯರು ಉತ್ಸಾಹದಿಂದ ಪಾಲ್ಗೊಂಡು ನಂದೋತ್ಸವವನ್ನು ಸಂಭ್ರಮಿಸಿದರು.

ಈ ಸಂದರ್ಭದಲ್ಲಿ 10ನೇ ತರಗತಿ ಪರೀಕ್ಷೆಯಲ್ಲಿ ಶೇ.95.2 ಅಂಕಗಳನ್ನು ಗಳಿಸಿದ ರಶಿಲ್ ನಾಗೇಶ್ ಶೆಟ್ಟಿಗಾರ್ ಅವರನ್ನು ಸಮುದಾಯದ ವತಿಯಿಂದ ವಿಶೇಷವಾಗಿ ಸನ್ಮಾನಿಸಿ ಅಭಿನಂದಿಸಲಾಯಿತು. ಅವರ ಶೈಕ್ಷಣಿಕ ಸಾಧನೆಯನ್ನು ಶ್ಲಾಘಿಸಿ, ಮುಂದಿನ ವಿದ್ಯಾಭ್ಯಾಸದಲ್ಲಿಯೂ ಉತ್ತಮ ಸಾಧನೆ ಮಾಡಲಿ ಎಂದು ಶುಭ ಹಾರೈಸಲಾಯಿತು.

ಕಾರ್ಯಕ್ರಮದ ಅಂಗವಾಗಿ ವರದ್ ರಾಜ್ ಶೆಟ್ಟಿಗಾರ್ ರವರು ಸ್ವಾಗತ ಭಾಷಣ ಮಾಡಿದರು. ಶ್ರೇಯಸ್ ಅವರು ಪೂಜಾ ವಿಧಿವಿಧಾನಗಳನ್ನು ನೆರವೇರಿಸಿದರು. ಗಿರೀಶ್ ನಾರಾಯಣ್ ಅವರು ಮಕ್ಕಳಿಗೆ ಮುಖವರ್ಣಿಕೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿದರು.

ಕಾರ್ಯಕ್ರಮದ ಸಂಘಟನೆ ಹಾಗೂ ನಿರ್ವಹಣೆಯಲ್ಲಿ ಕಾರ್ಯಕಾರಿ ಸಮಿತಿ ಸದಸ್ಯರಾದ ಮನೀಶ್ ಪದ್ಮಶಾಲಿ ಹಾಗೂ ಅರವಿಂದ್ ಶೆಟ್ಟಿಗಾರ್ ಅವರು ಸಕ್ರಿಯವಾಗಿ ಸಹಕರಿಸಿದರು.ಕೀರ್ತಿ ಕುಮಾರ್ ಅವರು ಕಾರ್ಯಕ್ರಮದ ಮುಖ್ಯ ಸಂಯೋಜಕರಾಗಿ ಕಾರ್ಯನಿರ್ವಹಿಸಿ, ಕಾರ್ಯಕ್ರಮದ ಯೋಜನೆ, ಸಮನ್ವಯ ಹಾಗೂ ವಿವಿಧ ಚಟುವಟಿಕೆಗಳ ಸುಗಮ ನಿರ್ವಹಣೆಯಲ್ಲಿ ಪ್ರಮುಖ ಪಾತ್ರವಹಿಸಿದರು.

ಕಾರ್ಯಕ್ರಮದ ಛಾಯಾಚಿತ್ರಗಳನ್ನು ವಿಘ್ನೇಶ್ ಹಾಗೂ ಮುರಳಿ ಅವರು ಛಾಯಚಿತ್ರಿಕರಿಸಿದರು. ಅವಿನ್ ಶೆಟ್ಟಿಗಾರ್ ಹಾಗೂ ಗಾಯತ್ರಿ ಮನೀಶ್ ಅವರು ಕಾರ್ಯಕ್ರಮವನ್ನು ನಿರೂಪಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಅರುಂಧತಿ ಮನೋಹರ್ ಅವರು ವಂದನಾರ್ಪಣೆ ಸಲ್ಲಿಸಿ, ಕಾರ್ಯಕ್ರಮದ ಯಶಸ್ಸಿಗೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ಧನ್ಯವಾದ ಸಲ್ಲಿಸಿದರು.
ಮಂಗಳೂರು ಮಿತ್ರ

