ಧಾರವಾಡ : ತಾಲೂಕಿನ ಅಮ್ಮಿನಬಾವಿ ಸಂಸ್ಥಾನ ಪಂಚಗೃಹ ಹಿರೇಮಠದ ಹಿರಿಯ ಶ್ರೀಗಳಾದ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿಯವರ 93ನೆಯ ವರ್ಧಂತಿ ಮಹೋತ್ಸವವು ಗುರುವಾರ (ಸಪ್ಟಂಬರ್-10ರಂದು) ಮುಂಜಾನೆ 10.30 ಗಂಟೆಗೆ ಶ್ರೀಮಠದ ಕಿರಿಯ ಶ್ರೀಗಳಾದ ಅಭಿನವ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿಯವರ ಸಾನ್ನಿಧ್ಯದಲ್ಲಿ ಜರುಗಲಿದೆ. ಸವದತ್ತಿ ಮೂಲಿಮಠದ ಶ್ರೀಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುವರು.
ತಮ್ಮ 5 ನೆಯ ವರ್ಷದಲ್ಲಿಯೇ(1939) ಸನ್ಯಾಸ ದೀಕ್ಷೆಗೆ ಒಳಗಾಗಿರುವ ಹಿರಿಯ ಶ್ರೀಗಳಾದ ಶಾಂತಲಿಂಗ ಶಿವಾಚಾರ್ಯರು ನಿರಂತರ ಶಿವಪೂಜಾ ತಪೋನುಷ್ಠಾನದೊಂದಿಗೆ ತಮ್ಮ ಸುದೀರ್ಘ 93 ವಸಂತಗಳ ಸನ್ಯಾಸದ ಬದುಕನ್ನು ಯಶಸ್ವಿಯಾಗಿ ಮುನ್ನಡೆಸಿದ್ದಾರೆ. ಅಮ್ಮಿನಬಾವಿ ಹಾಗೂ ಸುತ್ತಲಿನ ಗ್ರಾಮಗಳ ಭಕ್ತ ಸಂಕುಲದ ಸಹಕಾರದೊಂದಿಗೆ 1965ರಲ್ಲಿ ಶ್ರೀಶಾಂತೇಶ್ವರ ಪೌಢ ಶಾಲೆಯನ್ನು 1991ರಲ್ಲಿ ತಮ್ಮ ಶ್ರೀಮಠದ ಆವರಣದಲ್ಲಿ ಕನ್ನಡ ಪ್ರಾಥಮಿಕ ಶಾಲೆಯನ್ನೂ ಪ್ರಾರಂಭಿಸುವ ಮೂಲಕ ವಿದ್ಯಾವಿಕಾಸಕ್ಕೆ ಅಮೂಲ್ಯ ಕೊಡುಗೆ ನೀಡಿದ್ದಾರೆ.
ತುಲಾಭಾರ ಸೇವೆ : ಶಾಂತಲಿಂಗ ಶ್ರೀಗಳ 93ನೆಯ ವರ್ಧಂತಿ ಮಹೋತ್ಸವದ ಅಂಗವಾಗಿ ಹಲವಾರು ಭಕ್ತರಿಂದ ವಿವಿಧ ತುಲಾಭಾರ ಸೇವೆಗಳು ನಡೆಯಲಿವೆ. ಹಿರಿಯ ಶ್ರೀಗಳ ಜನ್ಮದಿನದ ಭಕ್ತಿಸೇವೆಯಲ್ಲಿ ಗ್ರಾಮದ ಶೋಭಾ ಯರಗಂಬಳಿಮಠ ಅವರಿಂದ 108 ಮುತ್ತೈದೆಯರಿಗೆ ಉಡಿತುಂಬುವ ಕಾರ್ಯಕ್ರಮ ಸಹ ಜರುಗಲಿದೆ. ಪಾಲ್ಗೊಂಡ ಸಮಸ್ತ ಭಕ್ತ ಸಮೂಹಕ್ಕೆ ಅಬಕಾರಿ ಇಲಾಖೆ ಸಿಪಿಐ ಅಮೃತ ಗುಡಿ ದಾಸೋಹ ಸೇವೆ ಸಲ್ಲಿಸುವರು. ಇದೇ ಸಂದರ್ಭದಲ್ಲಿ ಕಿರಿಯ ಶ್ರೀಗಳಾದ ಅಭಿನವ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿಯವರು ಶ್ರಾವಣ ಮಾಸದ ಪರ್ಯಂತ ನಡೆಸಿದ ಸಾಮೂಹಿಕ ಇಷ್ಟಲಿಂಗ ಮಹಾಪೂಜಾನುಷ್ಠಾನ ಮಂಗಲಗೊಳ್ಳಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ

