ಮಂಗಳೂರು: ಬಂಟರ ಯಾನೆ ನಾಡವರ ಮಾತೃಸಂಘ, ವಿವಿಧ ಬಂಟರ ಸಂಘಗಳು, ಶ್ರೀ ಸಿದ್ಧಿವಿನಾಯಕ ಪ್ರತಿಷ್ಠಾನ ಹಾಗೂ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಆಶ್ರಯದಲ್ಲಿ 20ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ, ತೆನೆಹಬ್ಬ ಹಾಗೂ ಅಷ್ಟೋತ್ತರ ಸಹಸ್ರ ನಾರಿಕೇಳ ಮಹಾಗಣಯಾಗ ಸೆ.14ರಿಂದ 16ರವರೆಗೆ ಬಂಟ್ಸ್ ಹಾಸ್ಟೇಲ್ನ ‘ಓಂಕಾರ ನಗರ’ದಲ್ಲಿ ನಡೆಯಲಿದೆ ಎಂದು ಶ್ರೀ ಸಿದ್ಧಿವಿನಾಯಕ ಪ್ರತಿಷ್ಠಾನದ ಮ್ಯಾನೇಜಿಂಗ್ ಟ್ರಸ್ಟಿ ಅಜಿತ್ ಕುಮಾರ್ ರೈ ಮಾಲಾಡಿ ತಿಳಿಸಿದರು.

ಅಮೃತೋತ್ಸವ ಕಟ್ಟಡದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸೆ.13ರಂದು ರಾಧಾಕೃಷ್ಣ ದೇವಸ್ಥಾನದಲ್ಲಿ ಸಾಮೂಹಿಕ ಪ್ರಾರ್ಥನೆ ಬಳಿಕ ಗಣೇಶ ವಿಗ್ರಹವನ್ನು ‘ಓಂಕಾರ ನಗರ’ಕ್ಕೆ ಬರಮಾಡಿಕೊಳ್ಳಲಾಗುವುದು ಎಂದರು.
ಸೆ.14ರಂದು ಮೂರ್ತಿ ಪ್ರತಿಷ್ಠೆ, ಧ್ವಜಾರೋಹಣ, ಉದ್ಘಾಟನೆ, ತೆನೆ ವಿತರಣೆ, ‘ಶ್ರೀ ಮಂಗಳಪುರದ ಮಂಗಳಾಂಬಿಕೆ’ ನೃತ್ಯನಾಟಕ, ಧಾರ್ಮಿಕ ಸಭೆ ಹಾಗೂ ‘ಬಂಟಕಲಾ ಸಂಗಮ–2026’ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದರು .
ಶ್ರೀ ಸಿದ್ಧಿವಿನಾಯಕ ಪ್ರತಿಷ್ಠಾನದ ಟ್ರಸ್ಟಿ ಡಾ. ಆಶಾಜ್ಯೋತಿ ರೈ ಬಂಬ್ರಾಣ ಮಾತನಾಡಿ, ಸೆ.15ರಂದು ಮೂಡಪ್ಪ ಸೇವೆ, ಮಹಾಪೂಜೆ ಹಾಗೂ ಅಷ್ಟೋತ್ತರ ಸಹಸ್ರ ನಾರಿಕೇಳ ಮಹಾಗಣಯಾಗದ ಪೂರ್ವಭಾವಿ ಧಾರ್ಮಿಕ ವಿಧಿವಿಧಾನಗಳು ನಡೆಯಲಿವೆ. ಸಂಜೆ ಧಾರ್ಮಿಕ ಸಭೆ ಹಾಗೂ ರಾತ್ರಿ ಸಂಗೀತ ಸಂಜೆ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.

ಸೆ.16ರಂದು ಮಹಾಗಣಯಾಗ, ಪೂರ್ಣಾಹುತಿ, ಮಹಾಪೂಜೆ ಹಾಗೂ ಮಹಾ ಅನ್ನಸಂತರ್ಪಣೆ ನಡೆಯಲಿದ್ದು, ಸಂಜೆ 3.30ಕ್ಕೆ ಶೋಭಾಯಾತ್ರೆ ಆರಂಭವಾಗಿ ವಿವಿಧ ಮಾರ್ಗಗಳ ಮೂಲಕ ಶ್ರೀ ಮಹಾಮ್ಮಾಯಿ ದೇವಸ್ಥಾನದ ಕೆರೆಯಲ್ಲಿ ವಿಗ್ರಹ ವಿಸರ್ಜನೆಗೊಳ್ಳಲಿದೆ ಎಂದರು .
ಪತ್ರಿಕಾಗೋಷ್ಠಿಯಲ್ಲಿ ಬಂಟರ ಯಾನೆ ನಾಡವರ ಮಾತೃಸಂಘದ ಉಪಾಧ್ಯಕ್ಷ ಹೇಮನಾಥ ಶೆಟ್ಟಿ ಕಾವು, ಪ್ರಧಾನ ಕಾರ್ಯದರ್ಶಿ ಎಂ. ಕರುಣಾಕರ ಶೆಟ್ಟಿ, ಜೊತೆ ಕಾರ್ಯದರ್ಶಿ ಪದ್ಮನಾಭ ಶೆಟ್ಟಿ ಪುಂಚಮೆ, ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಜಯಶೀಲ ಅಡ್ಯಂತಾಯ, ಪ್ರಧಾನ ಕಾರ್ಯದರ್ಶಿ ಸದಾಶಿವ ಶೆಟ್ಟಿ ಬಿಜೈ ಹಾಗೂ ಪ್ರಮುಖರಾದ ರಾಮ್ ಮೋಹನ್ ರೈ ಉಪಸ್ಥಿತರಿದ್ದರು.

