ಮಂಗಳೂರು: ತುಳು ಭಾಷೆಯನ್ನು ಕರ್ನಾಟಕದ ಎರಡನೇ ಅಧಿಕೃತ ಭಾಷೆಯಾಗಿ ಘೋಷಿಸಬೇಕು ಎಂದು ಅಖಿಲ ಭಾರತ ತುಳು ಒಕ್ಕೂಟ (ರಿ.), ಮಂಗಳೂರು ಸರ್ಕಾರವನ್ನು ಒತ್ತಾಯಿಸಿದೆ.
ನಗರದ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ಅಧ್ಯಕ್ಷ ಎ.ಸಿ.ಭಂಡಾರಿ ಅವರು 1970ರಲ್ಲಿ ಎಸ್.ಆರ್.ಹೆಗ್ಡೆ ಅವರ ನೇತೃತ್ವದಲ್ಲಿ ಆರಂಭವಾದ ತುಳುಕೂಟವು ಕಳೆದ ಹಲವು ದಶಕಗಳಿಂದ ತುಳು ಭಾಷೆಯ ಬೆಳವಣಿಗೆ, ಸಂರಕ್ಷಣೆ ಹಾಗೂ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡುತ್ತಿದೆ ಎಂದು ಹೇಳಿದರು.
ಪ್ರಸ್ತುತ ದೇಶ ಹಾಗೂ ವಿದೇಶಗಳಲ್ಲಿ ಸುಮಾರು 50 ಶಾಖೆಗಳನ್ನು ಹೊಂದಿರುವ ಸಂಘಟನೆ, ತುಳು ಭಾಷೆ, ಸಾಹಿತ್ಯ, ಕಲೆ ಮತ್ತು ಸಂಸ್ಕೃತಿಯ ಉಳಿವಿಗಾಗಿ ವಿವಿಧ ಕಾರ್ಯಕ್ರಮಗಳನ್ನು ನಡೆಸುತ್ತಿದೆ ಎಂದರು.

ತುಳು ಭಾಷೆ ಕೇವಲ ತುಳುವರ ಭಾಷೆಯಲ್ಲ. ಜಾತಿ, ಧರ್ಮ ಮತ್ತು ಭಾಷೆಯ ಭೇದವಿಲ್ಲದೆ ಕರ್ನಾಟಕದ ಎಲ್ಲರ ಭಾಷೆಯಾಗಿ ತುಳುವನ್ನು ಬೆಳೆಸುವ ಉದ್ದೇಶದಿಂದ ಸಂಘಟನೆಗಳು ಕಾರ್ಯನಿರ್ವಹಿಸುತ್ತಿವೆ. ತುಳುವಿಗೆ ಅಧಿಕೃತ ಭಾಷೆಯ ಸ್ಥಾನಮಾನ ದೊರಕಬೇಕು ಎಂಬುದು ದೇಶ-ವಿದೇಶಗಳಲ್ಲಿ ನೆಲೆಸಿರುವ ತುಳುವರ ಒಕ್ಕೊರಲಿನ ಆಶಯವಾಗಿದೆ ಎಂದು ತಿಳಿಸಿದರು.
18 ಲಕ್ಷಕ್ಕೂ ಅಧಿಕ ಜನರ ಮಾತೃಭಾಷೆಯಾಗಿರುವ ತುಳು, ತುಳುನಾಡಿನ ಪ್ರಮುಖ ಸಾಂಸ್ಕೃತಿಕ ಹಾಗೂ ವ್ಯಾವಹಾರಿಕ ಭಾಷೆಯಾಗಿದೆ. ಸಮೃದ್ಧ ಸಾಹಿತ್ಯ, ಪುರಾತನ ಶಾಸನಗಳು ಹಾಗೂ ಸ್ವಂತ ಲಿಪಿಯನ್ನು ಹೊಂದಿದ್ದರೂ, ರಾಜ್ಯದ ಅಧಿಕೃತ ಭಾಷೆಯ ಸ್ಥಾನಮಾನ ಮತ್ತು ಸಂವಿಧಾನದ 8ನೇ ಪರಿಚ್ಛೇದದಲ್ಲಿ ಮಾನ್ಯತೆ ಇನ್ನೂ ದೊರೆತಿಲ್ಲ ಎಂದು ಅವರು ವಿಷಾದ ವ್ಯಕ್ತಪಡಿಸಿದರು.
ಉಜಿರೆಯಲ್ಲಿ ನಡೆದ ವಿಶ್ವ ತುಳು ಸಮ್ಮೇಳನದ ನಿರ್ಣಯಗಳು, ವಿವಿಧ ಸಂಘ-ಸಂಸ್ಥೆಗಳ ಮನವಿಗಳು ಹಾಗೂ ಡಾ.ಎಂ.ಮೋಹನ್ ಆಳ್ವ ನೇತೃತ್ವದ ಸಮಿತಿ ಸಲ್ಲಿಸಿದ ವರದಿ ಸೇರಿದಂತೆ ಅಗತ್ಯ ದಾಖಲೆಗಳನ್ನು ಈಗಾಗಲೇ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಈ ಕುರಿತು ಶಾಸಕರು ಮತ್ತು ಸಂಸದರು ಕೂಡ ಸದನದಲ್ಲಿ ಧ್ವನಿ ಎತ್ತಿದ್ದಾರೆ ಎಂದು ಹೇಳಿದರು.
ಮಂಗಳೂರಿನಲ್ಲಿ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ತುಳು ಭಾಷೆಯನ್ನು ಕರ್ನಾಟಕದ ಎರಡನೇ ಅಧಿಕೃತ ಭಾಷೆಯಾಗಿ ಘೋಷಿಸುವ ಮಹತ್ವದ ನಿರ್ಧಾರ ಕೈಗೊಳ್ಳಬೇಕು. ಈ ನಿಟ್ಟಿನಲ್ಲಿ ಕರಾವಳಿಯ ಎಲ್ಲಾ ಶಾಸಕರು ಪಕ್ಷಭೇದ ಮರೆತು ಒಕ್ಕೊರಲಿನಿಂದ ಬೆಂಬಲ ನೀಡಬೇಕು ಎಂದು ಎ.ಸಿ.ಭಂಡಾರಿ ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಒಕ್ಕೂಟದ ಪ್ರಮುಖರಾದ ಬಿ. ಜಯಕರ ಶೆಟ್ಟಿ ಇಂದ್ರಾಳಿ, ಯೋಗೀಶ್ ಶೆಟ್ಟಿ ಜೆಪ್ಪು, ಪಿ.ಎ. ಪೂಜಾರಿ, ಕದ್ರಿ ನವನೀತ ಶೆಟ್ಟಿ, ಗಂಗಾಧರ ಕಿದಿಯೂರು ಹಾಗೂ ತಾರನಾಥ ಶೆಟ್ಟಿ ಬೋಳಾರ ಉಪಸ್ಥಿತರಿದ್ದರು.

