ಪುತ್ತೂರು : ಬೆಳ್ಳಾರೆ ಸರ್ಕಾರಿ ವಿದ್ಯಾರ್ಥಿನಿಲಯಕ್ಕೆ ಅಕ್ರಮವಾಗಿ ಪ್ರವೇಶಿಸಿ ವಿದ್ಯಾರ್ಥಿನಿಯರ ಬಟ್ಟೆಗಳನ್ನು ಕಳವು ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಬೆಳ್ಳಾರೆ ಸರ್ಕಾರಿ ವಿದ್ಯಾರ್ಥಿನಿಲಯದ ಮೇಲ್ವಿಚಾರಕಿಯೊಬ್ಬರು ನೀಡಿದ ದೂರಿನಂತೆ, ವಿದ್ಯಾರ್ಥಿನಿ ನಿಲಯದಲ್ಲಿ ವಿದ್ಯಾರ್ಥಿನಿಯರು ಒಣಗಿಸಲು ಹಾಕಿದ ಅವರ ಬಟ್ಟೆಗಳು ದಿನಾಂಕ: 2.09.2026 ರಂದು ಬೆಳಿಗ್ಗೆ ನೋಡಿದಾಗ ಕಾಣೆಯಾಗಿದ್ದು, ಈ ಬಗ್ಗೆ ಸದ್ರಿ ವಿಧ್ಯಾರ್ಥಿಗಳು ಮೇಲ್ವಿಚಾರಕಿಗೆ ತಿಳಿಸಿರುತ್ತಾರೆ. ನಂತರ ಸಿ ಸಿ ಕ್ಯಾಮರಾವನ್ನು ಪರಿಶೀಲಿಸಿದಾಗ ದಿನಾಂಕ: 2.09.2026 ರಂದು ಬೆಳಗ್ಗಿನ ಜಾವ ಅಪರಿಚಿತ ಯುವಕನೋರ್ವ ವಿದ್ಯಾರ್ಥಿನಿಲಯಕ್ಕೆ ಅತಿಕ್ರಮ ಪ್ರವೇಶ ಮಾಡಿ ವಿದ್ಯಾರ್ಥಿಗಳು ಒಣಗಿಸಲು ಹಾಕಿದ ಬಟ್ಟೆಗಳಲ್ಲಿ ಕೆಲವು ಬಟ್ಟೆಗಳನ್ನು ಕಳವು ಮಾಡಿಕೊಂಡು ಹೋಗುತ್ತಿರುವುದು ಕಂಡುಬಂದಿರುತ್ತದೆ ಎಂಬುದಾಗಿ ದಿನಾಂಕ: 5.09.2026 ರಂದು ನೀಡಿದ ದೂರಿನ ಮೇರೆಗೆ ಬೆಳ್ಳಾರೆ ಪೊಲೀಸ್ ಠಾಣಾ ಅ.ಕ್ರ 54/2026 ಕಲಂ: 331(4),305 BNS-2023 ರಂತೆ ಪ್ರಕರಣ ದಾಖಲಾಗಿರುತ್ತದೆ.
ಪ್ರಕರಣದ ತನಿಖೆ ನಡೆಸಿದ ಪೊಲೀಸರು ಪುತ್ತೂರು ಕೊಳ್ತಿಗೆ ನಿವಾಸಿ ಕೆ.ರಾಮಚಂದ್ರ (35) ಎಂಬಾತನನ್ನು ಸೆಪ್ಟೆಂಬರ್ 7ರಂದು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನ್ಯಾಯಾಲಯವು ಆರೋಪಿಗೆ ಸೆಪ್ಟೆಂಬರ್ 15ರವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ

