ಧಾರವಾಡ : ಭಾರತದ ಮಣ್ಣಿನ ಕಣಗಳಲ್ಲಿ ಶಿವಸಂಸ್ಕೃತಿಯನ್ನು ಉಳಿಸಿ-ಬೆಳೆಸಿ ಎತ್ತಿಹಿಡಿದ ಶ್ರೀವೀರಭದ್ರ ದೇವರದು ಘನವಾದ ವ್ಯಕ್ತಿತ್ವ. ಶಿವನ ಮಾನಸಪುತ್ರ ಹಾಗೂ ಶಿವನ ಸಾಕ್ಷಾತ್ ಅಂಶವೇ ಆಗಿರುವ ಶ್ರೀವೀರಭದ್ರ ದೇವರು ಅವತಾರ ಹೊಂದಿದ ಭಾದ್ರಪದ ಮಾಸದ ಮೊದಲ ಮಂಗಳವಾರ (ಸೆ.15 : ರಂದು) ವಿಶ್ವವ್ಯಾಪಿ ಎಲ್ಲೆಡೆ ಶ್ರೀವೀರಭದ್ರ ದೇವರ ಜಯಂತ್ಯುತ್ಸವ ಆಚರಿಸಲು ನಿರ್ಧರಿಸಲಾಗಿದೆ.
ಸತ್ಯದ ನೈತಿಕ ನೆಲೆಯನ್ನು ಎತ್ತಿಹಿಡಿದು ಬದುಕಿನಲ್ಲಿರಬಹುದಾದ ಋಣಾತ್ಮಕ ಮನೋಭಾವಗಳನ್ನು ನಿವಾರಿಸಿ ಅವರಿವರೆನ್ನದೇ ಎಲ್ಲರಿಗೂ ಶಿವಸಿದ್ಧಾಂತದ ಜನಕಲ್ಯಾಣದ ಆಶಯಗಳನ್ನು ಬೋಧಿಸಿರುವ ವಿಶಾಲ ಮನಸ್ಥಿತಿಯ ಶ್ರೀವೀರಭದ್ರ ದೇವರು ಯಾವುದೋ ಒಂದು ನಿರ್ದಿಷ್ಟ ಜಾತಿಗೆ ಸೀಮಿತವಾಗದೇ ಬಹಳಷ್ಟು ಸಮುದಾಯಗಳ ಕುಲದೈವವಾಗಿ ಪೂಜೆಗೊಳ್ಳುತ್ತಿದ್ದಾರೆ.

ವಿಶ್ವವ್ಯಾಪಿ ಆಚರಣೆ : ಕರ್ನಾಟಕವೂ ಸೇರಿದಂತೆ ಭಾರತದ ವಿವಿಧ ರಾಜ್ಯಗಳಲ್ಲಿ ಲಕ್ಷ ಲಕ್ಷ ಸಂಖ್ಯೆಯಲ್ಲಿ ವೀರಭದ್ರ ದೇವರ ಭಕ್ತರಿದ್ದಾರೆ. ಜೊತೆಗೆ ಸಾವಿರಾರು ಸಂಖ್ಯೆಯ ವೀರಭದ್ರ ದೇವರ ದೇವಾಲಯಗಳಿವೆ. ಇದರಂತೆ ಭಾರತದ ಹೊರಗೆ ವಿಶ್ವದ ವಿವಿಧ ರಾಷ್ಟçಗಳಲ್ಲಿ ಶ್ರೀವೀರಭದ್ರ ದೇವರ ಭಕ್ತಗಣ ನೆಲೆಸಿರುವುದನ್ನು ಗುರುತಿಸಲಾಗಿದೆ. ಸೆಪ್ಟಂ.15 ರಂದು(ಮ0ಗಳವಾರ) ಏಕಕಾಲಕ್ಕೆ ವಿಶ್ವವ್ಯಾಪಿ ಆಚರಣೆಯಾಗಿ ಶ್ರೀವೀರಭದ್ರ ದೇವರ ಜಯಂತ್ಯುತ್ಸವ ಆಚರಿಸುವಂತೆ ವೀರಶೈವ-ಲಿಂಗಾಯತ ಸಂಘಟನಾ ವೇದಿಕೆಯ ಶ್ರೀವೀರಭದ್ರೇಶ್ವರ ಪ್ರಚಾರ ಸಮಿತಿಯ ರಾಜ್ಯಾಧ್ಯಕ್ಷ ಸಿ.ಎಂ.ಶಿವಶರಣಪ್ಪ ಕಲಬುರ್ಗಿ, ವಿವಿಧ ಪದಾಧಿಕಾರಿಗಳಾದ ಪಿ.ಎಂ.ಚಿಕ್ಕಮಠ, ಗಿರೀಶಕುಮಾರ ಬುಡರಕಟ್ಟಿಮಠ, ರಮೇಶ ಉಳ್ಳಾಗಡ್ಡಿ, ಪ್ರಕಾಶ ಅಂದಾನಿಮಠ ಇತರರು ಕರೆನೀಡಿದ್ದಾರೆ.
ದೀಪೋತ್ಸವ : ಶ್ರೀವೀರಭದ್ರ ದೇವರ ಜಯಂತ್ಯುತ್ಸವದ ಅಂಗವಾಗಿ ಎಲ್ಲಾ ನಗರ ಮತ್ತು ಗ್ರಾಮೀಣ ಭಾಗದ ಶ್ರೀವೀರಭದ್ರ ದೇವರ ದೇವಾಲಯಗಳಲ್ಲಿ, ಮನೆಯಂಗಳದಲ್ಲಿ ಹಾಗೂ ಬಾಗಿಲ ಬಳಿ ಪ್ರಣತೆಗಳನ್ನು ಬೆಳಗಿಸಿ ಸೆಪ್ಟಂ.15 ರಂದು ಸಾಯಂಕಾಲ ಎಲ್ಲರೂ ಸಾಮೂಹಿಕವಾಗಿ ದೀಪೋತ್ಸವವನ್ನು ಆಚರಿಸಿ ಪ್ರಾರ್ಥನೆ ಸಲ್ಲಿಸುವಂತೆ ಶ್ರೀವೀರಭದ್ರ ದೇವರ ಭಕ್ತರೆಲ್ಲರಲ್ಲಿ ಪ್ರಚಾರ ಸಮಿತಿ ಮನವಿ ಮಾಡಿದೆ.
ಮಂಗಳೂರು ಮಿತ್ರ

