ಲಕ್ನೋ: ಉತ್ತರ ಪ್ರದೇಶದಲ್ಲಿ 2027ರ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ನಡುವೆಯೇ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮಹಿಳೆಯರ ಆರ್ಥಿಕ ಸ್ವಾವಲಂಬನೆಗೆ ಉತ್ತೇಜನ ನೀಡುವ ಮಹತ್ವದ ಯೋಜನೆಯನ್ನು ಘೋಷಿಸಿದ್ದಾರೆ. ರಾಜ್ಯದ ಸುಮಾರು ಒಂದು ಕೋಟಿ ಮಹಿಳೆಯರಿಗೆ ₹1 ಲಕ್ಷದವರೆಗೆ ಬಡ್ಡಿರಹಿತ ಸಾಲ ನೀಡುವ ಉದ್ದೇಶ ಸರ್ಕಾರ ಹೊಂದಿದೆ.
ವಾರಾಣಸಿಯಲ್ಲಿ ನಡೆದ ‘ವರ್ಕಿಂಗ್ ವುಮೆನ್ಸ್ ಹಾನರ್’ ಕಾರ್ಯಕ್ರಮದಲ್ಲಿ ಮಾತನಾಡಿದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಮಹಿಳೆಯರ ಉದ್ಯಮಶೀಲತೆ ಮತ್ತು ಆರ್ಥಿಕ ಸ್ವಾವಲಂಬನೆಯನ್ನು ಉತ್ತೇಜಿಸುವುದು ಸರ್ಕಾರದ ಪ್ರಮುಖ ಆದ್ಯತೆಯಾಗಿದೆ ಎಂದು ಹೇಳಿದರು.
ಉತ್ತರ ಪ್ರದೇಶ ಮಹಿಳಾ ಉದ್ಯಮಿ ಕ್ರೆಡಿಟ್ ಯೋಜನೆಯಡಿ ಅರ್ಹ ಮಹಿಳೆಯರಿಗೆ ಒಟ್ಟು ₹1 ಲಕ್ಷದವರೆಗೆ ಬಡ್ಡಿರಹಿತ ಸಾಲವನ್ನು ಮೂರು ಹಂತಗಳಲ್ಲಿ ನೀಡಲಾಗುವುದು. ಮೊದಲ ಹಂತದಲ್ಲಿ ₹20,000, ಅದನ್ನು ಸಕಾಲದಲ್ಲಿ ಮರುಪಾವತಿಸಿದ ಬಳಿಕ ಎರಡನೇ ಹಂತದಲ್ಲಿ ₹30,000 ಹಾಗೂ ನಂತರ ಮೂರನೇ ಹಂತದಲ್ಲಿ ₹50,000 ಸಾಲ ಪಡೆಯುವ ಅವಕಾಶ ಕಲ್ಪಿಸಲಾಗುತ್ತದೆ.
ಮಹಿಳೆಯರು ಸ್ವಂತ ಉದ್ಯಮ ಆರಂಭಿಸಲು ಅಥವಾ ಈಗಾಗಲೇ ನಡೆಸುತ್ತಿರುವ ಸಣ್ಣ ಉದ್ಯಮವನ್ನು ವಿಸ್ತರಿಸಲು ಈ ಸಾಲವನ್ನು ಬಳಸಿಕೊಳ್ಳಬಹುದು. ಕೃಷಿ ಆಧಾರಿತ ಚಟುವಟಿಕೆಗಳು, ಪಶುಸಂಗೋಪನೆ, ಆಹಾರ ಸಂಸ್ಕರಣೆ, ಸಣ್ಣ ವ್ಯಾಪಾರ ಹಾಗೂ ಕರಕುಶಲ ಸೇರಿದಂತೆ ವಿವಿಧ ಸ್ವಯಂ ಉದ್ಯೋಗ ಕ್ಷೇತ್ರಗಳಿಗೆ ಯೋಜನೆಯಿಂದ ನೆರವು ದೊರೆಯುವ ನಿರೀಕ್ಷೆಯಿದೆ.
ವಿಶೇಷವಾಗಿ ಗ್ರಾಮೀಣ ಪ್ರದೇಶಗಳ ಸ್ವಸಹಾಯ ಸಂಘಗಳೊಂದಿಗೆ ಸಂಪರ್ಕ ಹೊಂದಿರುವ ಮಹಿಳೆಯರಿಗೆ ಯೋಜನೆಯಿಂದ ಹೆಚ್ಚಿನ ಪ್ರಯೋಜನವಾಗುವ ಸಾಧ್ಯತೆ ಇದೆ. ಯೋಜನೆಯ ಪರಿಣಾಮಕಾರಿ ಅನುಷ್ಠಾನಕ್ಕಾಗಿ ರಾಜ್ಯ ಸರ್ಕಾರ ಬ್ಯಾಂಕ್ಗಳೊಂದಿಗೆ ಚರ್ಚೆ ನಡೆಸಿದ್ದು, ಅರ್ಹ ಮಹಿಳೆಯರಿಗೆ ಸುಲಭ ಮತ್ತು ತ್ವರಿತವಾಗಿ ಸಾಲ ಸೌಲಭ್ಯ ತಲುಪಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗಿದೆ.
2027ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಮಹಿಳಾ ಕೇಂದ್ರಿತ ಯೋಜನೆಗಳಿಗೆ ಹೆಚ್ಚಿನ ಮಹತ್ವ ದೊರೆಯುತ್ತಿರುವ ಸಂದರ್ಭದಲ್ಲಿ ಯೋಗಿ ಸರ್ಕಾರದ ಈ ಹೊಸ ಘೋಷಣೆ ಗಮನ ಸೆಳೆದಿದೆ.

