ಮಂಗಳೂರು: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ, ಜಪ್ಪಿನಮೊಗರು ಆಶ್ರಯದಲ್ಲಿ 18ನೇ ವರ್ಷದ ಸಾರ್ವಜನಿಕ ಗಣೇಶೋತ್ಸವವು ಸೆ.13ರಿಂದ 15ರವರೆಗೆ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ ಎಂದು ಸಮಿತಿ ಅಧ್ಯಕ್ಷ ಜೆ.ನಾಗೇಂದ್ರ ಕುಮಾರ್ ತಿಳಿಸಿದ್ದಾರೆ.
ಸೆ.13ರಂದು ಸಂಜೆ 4ಕ್ಕೆ ಶ್ರೀ ವೈದ್ಯನಾಥ ಮಹಾದ್ವಾರದಿಂದ ಗಣೇಶ ಮಂಟಪಕ್ಕೆ ಶ್ರೀವಿಘ್ನೇಶ್ವರನ ವಿಗ್ರಹ ಹಾಗೂ ಹರಕೆ ಸಾಮಗ್ರಿಗಳ ಮೆರವಣಿಗೆ ನಡೆಯಲಿದೆ. ಸಂಜೆ 6.30ಕ್ಕೆ ಉದ್ಘಾಟನಾ ಕಾರ್ಯಕ್ರಮ ಹಾಗೂ ರಾತ್ರಿ 8ಕ್ಕೆ ‘ಯಕ್ಷ ತೆಲಿಕೆ’ ಯಕ್ಷ ಹಾಸ್ಯ ವೈಭವ ನಡೆಯಲಿದೆ ಎಂದರು.

ಸೆ.14ರಂದು ಬೆಳಗ್ಗೆ 7ಕ್ಕೆ ಮಹಾಗಣಪತಿ ದೇವರ ಪ್ರತಿಷ್ಠಾಪನೆ, ಭಜನಾ ಕಾರ್ಯಕ್ರಮ ಹಾಗೂ ಮಧ್ಯಾಹ್ನ ‘ಸಿರಿ ಕೃಷ್ಣ ಚಂದಪಾಲಿ’ ತುಳು ಯಕ್ಷಗಾನ ನಡೆಯಲಿದೆ. ಸಂಜೆ ಧಾರ್ಮಿಕ ಸಭೆ ಹಾಗೂ ರಾತ್ರಿ ‘ಸಂಗೀತ ಗಾನ ಸಂಭ್ರಮ’ ಆಯೋಜಿಸಲಾಗಿದೆ ಎಂದರು .
ಸೆ.15ರಂದು ಬೆಳಗ್ಗೆ 7.30ಕ್ಕೆ 108 ತೆಂಗಿನಕಾಯಿಯ ಮಹಾಗಣಯಾಗ, ‘ಮಂಗಳಾಪುರದ ಮಂಗಳಾಂಬೆ’ ನೃತ್ಯ ನಾಟಕ, ಮಹಾಪೂಜೆ ಹಾಗೂ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 5ಕ್ಕೆ ಕುಣಿತ ಭಜನೆ, ಚಂಡೆ ಹಾಗೂ ವಾದ್ಯಗಳೊಂದಿಗೆ ಶ್ರೀ ವಿಘ್ನೇಶ್ವರ ದೇವರ ಭವ್ಯ ಶೋಭಾಯಾತ್ರೆ ನಡೆಯಲಿದ್ದು, ರಾತ್ರಿ 11ಕ್ಕೆ ಕಡೆಕಾರ್ ನೇತ್ರಾವತಿ ನದಿ ತೀರದಲ್ಲಿ ಜಲಾಧಿವಾಸ ನೆರವೇರಲಿದೆ.

ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ಕಾರ್ಯಾಧ್ಯಕ್ಷರಾದ ಸುಧಾಕರ ಜೆ., ಶ್ರೀಧರ್ರಾಜ್ ಶೆಟ್ಟಿ, ಉದಯಕುಮಾರ್ ಕೊಟ್ಟಾರಿ, ಗಣೇಶ್ ಶೆಟ್ಟಿ ಕಂರ್ಬೆಟ್ಟು, ಬಾಲಕೃಷ್ಣ ಹೆಗ್ಡೆ, ಶೈಲೇಶ್ ಭಂಡಾರಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

