ಧಾರವಾಡ : ಇಹದ ಬದುಕಿನ ವಿದ್ಯಮಾನಗಳು ಹುಟ್ಟುಹಾಕುವ ಅಂತರ0ಗದ ಅಜ್ಞಾನ ನಿವಾರಿಸಿ ಅನುಭಾವಪೂರ್ಣ ಆತ್ಮಜ್ಞಾನ ಬೆಳಗಿಸುವ ಗುರುಸೇವೆಯಿಂದ ಬಯಲ ಬೆಳಗು ಸಾಧ್ಯವಾಗುತ್ತದೆ ಎಂದು ಅಮ್ಮಿನಬಾವಿ ಸಂಸ್ಥಾನ ಪಂಚಗೃಹ ಹಿರೇಮಠದ ಕಿರಿಯ ಶ್ರೀಗಳಾದ ಅಭಿನವ ಶಾಂತಲಿ0ಗ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಅವರು ಗುರುವಾರ ತಮ್ಮ ಶ್ರೀಮಠದ ಹಿರಿಯ ಶ್ರೀಗಳಾದ ಶಾಂತಲಿ0ಗ ಶಿವಾಚಾರ್ಯ ಸ್ವಾಮೀಜಿ ಅವರ 93ನೆಯ ವರ್ಧಂತ್ಯುತ್ಸವದ ನಿಮಿತ್ತ ಭಕ್ತಗಣ ಹಮ್ಮಿಕೊಂಡಿದ್ದ ತುಲಾಭಾರ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಮಾತನಾಡುತ್ತಿದ್ದರು. ಗುರುಸೇವೆಯಿಂದ ಮನುಷ್ಯನ ಅಹಂಕಾರ ಅಳಿದು ಚಿತ್ತಶುದ್ಧಿಯೊಂದಿಗೆ ಅವನ ಜೀವನ ವಿಧಾನವು ಸತ್ಯಾನ್ವೇಷಣೆಗೆ ತೆರೆದುಕೊಂಡು ಸನ್ನಡತೆ, ಪ್ರೀತಿ, ಸೇವೆ ಮತ್ತು ಸತ್ಕರ್ಮಗಳಿಂದ ಸುತ್ತಲಿನವರ ಬದುಕಿಗೂ ಬೆಳಕಾಗುತ್ತದೆ ಎಂದೂ ಅವರು ನುಡಿದರು.

ಆಶೀರ್ವಚನ ನೀಡಿದ ಹಿರಿಯ ಶ್ರೀಗಳಾದ ಶಾಂತಲಿ0ಗ ಶಿವಾಚಾರ್ಯ ಸ್ವಾಮೀಜಿ, ಅತ್ಯಂತ ಕ್ಷಣಿಕವಾದ ಮಾನವನ ಬದುಕಿನ ಕುರಿತು ನಿತ್ಯವೂ ಕೆಲವು ಕ್ಷಣಗಳ ಮಟ್ಟಿಗಾದರೂ ಪ್ರತಿಯೊಬ್ಬರೂ ವಿಚಾರ ಮಾಡಬೇಕು. ಬಾಳಿಗೆ ಬೆಳಕು ತುಂಬುವ ಶ್ರೀಗುರು ಭಗವತ್ ಸ್ವರೂಪಿಯಗಿದ್ದು, ಫಲಾಪೇಕ್ಷೆ ಇಲ್ಲದ ಮುಕ್ತ ಸೇವೆಯಿಂದ ಗುರುವಿನ ಕೃಪಾಕಾರುಣ್ಯ ಪ್ರಾಪ್ತವಾಗುತ್ತದೆ ಎಂದರು.
ತುಲಾಭಾರ ಸೇವೆ : ಆರೋಗ್ಯ ಇಲಾಖೆ ನಿವೃತ್ತ ಉದ್ಯೋಗಿ ಶೋಭಾ ಯರಗಂಬಳಿಮಠ (ಸಕ್ಕರೆ), ಶಿಕ್ಷಕಿ ಪ್ರೇಮಾ ಗುಡಿ(ಬೆಲ್ಲ), ಖಾದಿ ಕಾರ್ಯಕರ್ತ ಬಿ.ಸಿ. ಕೊಳ್ಳಿ (ಅಕ್ಕಿ), ವಕೀಲ ಸುನೀಲ ಗುಡಿ (ತೆಂಗಿನಕಾಯಿ), ಹೂವಿನಹಡಗಲಿ ತಾಲೂಕು ಹೊಳಗುಂದಿ ಗ್ರಾಮದ ಗುರುಬಸವರಾಜ ಮತ್ತೂರಮಠ (ರವೆ ಮತ್ತು ಬೆಲ್ಲ) ಪವನಕುಮಾರ ಕುಸೂಗಲ್ಲ(ಬೆಲ್ಲ), ಅಕ್ಕಮಹಾದೇವಿ ಯರಗಂಬಳಿಮಠ (ನಾಣ್ಯ), ಬಸವರಾಜ ಉಗರಗೋಳ (ತೆಂಗಿನಕಾಯಿ) ಅವರು ಹಿರಿಯ ಶ್ರೀಗಳಿಗೆ ತುಲಾಭಾರ ಸೇವೆಸಲ್ಲಿಸಿದರು. ಶ್ರೀಗಳ ಶತಾಯುಷ್ಯಕ್ಕೆ ಸಂಕಲ್ಪಸಿ ಶೋಭಾ ಯರಗಂಬಳಿಮಠ ಅವರು121 ಮುತ್ತೈದೆಯರಿಗೆ ಉಡಿತುಂಬಿದರು. ನವನಗರದ ಸದ್ಭಕ್ತರು, ಹಾರೋಬೆಳವಡಿಯ ವಿರೂಪಾಕ್ಷಪ್ಪ ಜಕ್ಕಣ್ಣವರ, ರಾಮಣ್ಣ ಜಕ್ಕಣ್ಣವರ, ಸುಧೀರ ದೇಶಪಾಂಡೆ, ರಾಮಣ್ಣ ಹುಲ್ಲೂರ, ಗದಗ ಜಿಲ್ಲೆ ಸೂಡಿ ಗ್ರಾಮಸ್ಥರು ಹಿರಿಯ ಶ್ರೀಗಳಿಗೆ ಗೌರವಾರ್ಪಣೆ ಮಾಡಿದರು.

ಶ್ರೀಮಠದ ಪರವಾಗಿ ನವನಗರದ ಕಾರ್ಪೋರೇಟರ್ ಸುನೀತಾ ಮಾಳವೇದಕರ, ನವನಗರ ಹಿತೋದ್ಧಾರಕ ಸಂಘದ ಉಪಾಧ್ಯಕ್ಷ ರಾಘವೇಂದ್ರ ಪೂಜಾರ, ಕಾರ್ಯದರ್ಶಿ ಮಲ್ಲಿಕಾರ್ಜುನ ಅಂಗಡಿ, ಕಾಶಿ ವಿಶ್ವೇಶ್ವರ ರುದ್ರಬಳಗದ ಅಧ್ಯಕ್ಷೆ ಸರೋಜಾ ಕಳ್ಳಿಮಠ, ಶೋಭಾ ಕೋರಿ, ತುಮಕೂರಿನ ವಿಶ್ರಾಂತ ಪ್ರಾಚಾರ್ಯ ಪ್ರೊ.ಉಮಾದೇವ ಎನ್.ವ್ಹಿ. ಸೇರಿದಂತೆ ಎಲ್ಲ ಸೇವಾಕರ್ತರನ್ನು ಗೌರವಿಸಿ ಶ್ರೀಗಳು ಆಶೀರ್ವದಿಸಿದರು. ದಿ.ಬಸಯ್ಯ ಗುಡಿ ಸ್ಮರಣಾರ್ಥ ಅವರ ಧರ್ಮಪತ್ನಿ ರುದ್ರಮ್ಮ ಗುಡಿ ದಾಸೋಹ ಸೇವೆ ಸಲ್ಲಿಸಿದರು. ಲೇಖಕ ಗುರುಮೂರ್ತಿ ಯರಗಂಬಳಿಮಠ ಮಾತನಾಡಿದರು. ಸೋಮಲಿಂಗಶಾಸ್ತಿç ಗುಡ್ಡದಮಠ ಸ್ವಾಗತಿಸಿದರು. ವಿನಾಯಕ ಹಿರೇಮಠ ನಿರೂಪಿಸಿದರು.

