ಮುಂಬೈ: ಕರ್ನಾಟಕದ ಬಹುಮುಖ ಸಾಂಸ್ಕೃತಿಕ ಪ್ರತಿಭೆಯ ಕಲಾವಿದ, ಹರಿದಾಸ ತೋನ್ಸೆ ಪುಷ್ಕಳ ಕುಮಾರ್ ಅವರು ಹರಿಕಥಾ ಕಲೆಯನ್ನು ಮೈಗೂಡಿಸಿಕೊಂಡು ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲದೆ, ದೇಶ-ವಿದೇಶಗಳ ವಿವಿಧ ವೇದಿಕೆಗಳಲ್ಲಿ ತಮ್ಮ ಕಲಾ ಪ್ರತಿಭೆಯಿಂದ ಜನಮನ್ನಣೆ ಗಳಿಸಿದ್ದಾರೆ.
ಮುಂಬೈಯಲ್ಲಿ ಪ್ರಪ್ರಥಮ ಬಾರಿಗೆ ಆಗಸ್ಟ್ 15ರಿಂದ 23ರವರೆಗೆ ಒಂಬತ್ತು ಸಂಘಟನೆಗಳ ಆಶ್ರಯದಲ್ಲಿ, ಒಂಬತ್ತು ವಿವಿಧ ಸ್ಥಳಗಳಲ್ಲಿ ವಿವಿಧ ಆಖ್ಯಾನಗಳನ್ನು ಒಳಗೊಂಡ ಹರಿಕಥಾ ನವಾಹವನ್ನು ಯಶಸ್ವಿಯಾಗಿ ನಡೆಸಿಕೊಟ್ಟರು.
ಆಗಸ್ಟ್ 15ರಂದು ಸಂತಾಕ್ರೂಸ್ ಬಿಲ್ಲವ ಭವನದಲ್ಲಿ ‘ಬಲಿಚಕ್ರವರ್ತಿ’ ಕಥಾನಕದೊಂದಿಗೆ ನವಾಹಕ್ಕೆ ಚಾಲನೆ ನೀಡಲಾಯಿತು. ಆಗಸ್ಟ್ 16ರಂದು ಬಾಂಡುಪ್ ಬಿಲ್ಲವ ಸ್ಥಳೀಯ ಕಚೇರಿ ಸಭಾಂಗಣದಲ್ಲಿ ‘ಸತ್ಯ ಹರಿಶ್ಚಂದ್ರ’, 17ರಂದು ಘಾಟ್ಕೋಪರ್ ಕನ್ನಡ ವೆಲ್ಫೇರ್ ಸೊಸೈಟಿಯ ಆಶ್ರಯದಲ್ಲಿ ‘ಗಜಗೌರಿ ವ್ರತ’, 18ರಂದು ಬೊರಿವಿಲಿ ತುಳು ಸಂಘದ ವತಿಯಿಂದ ‘ರೇಣುಕಾ ಮಹಾತ್ಮೆ’, 19ರಂದು ಕಲಾಜಗತ್ತಿನ ಆಶ್ರಯದಲ್ಲಿ ಪೇಜಾವರ ಮಠದಲ್ಲಿ ‘ಸತಿ ಸಾವಿತ್ರಿ’ ಕಥಾನಕವನ್ನು ಪ್ರಸ್ತುತಪಡಿಸಲಾಯಿತು.

ಆಗಸ್ಟ್ 20 ಮತ್ತು 21ರಂದು ಬಿಲ್ಲವ ಮತ್ತು ಬಂಟ್ಸ್ ಅಸೋಸಿಯೇಷನ್, ನವಿಮುಂಬೈ ಇವರ ಆಶ್ರಯದಲ್ಲಿ ಕ್ರಮವಾಗಿ ‘ನಾರಾಯಣಗುರು ಚರಿತ್ರೆ’ ಹಾಗೂ ‘ತ್ರಿಪಾದ ಮಹಿಮೆ’ ಹರಿಕಥೆ ನಡೆಯಿತು. ಆಗಸ್ಟ್ 22ರಂದು ಅಂಧೇರಿ ದತ್ತ ಮಂದಿರದಲ್ಲಿ ‘ಶ್ರೀಕೃಷ್ಣ ತುಲಾಭಾರ’ ಹಾಗೂ 23ರಂದು ಬಾಂಡುಪ್ ಪಿಂಪಲೇಶ್ವರ ಮಂದಿರದಲ್ಲಿ ‘ಭಕ್ತ ಸುಧಾಮ’ ಹರಿಕಥೆಯೊಂದಿಗೆ ನವಾಹ ಸಂಪನ್ನಗೊಂಡಿತು.
ಶ್ರಾವಣ ಮಾಸದಲ್ಲಿ ಮುಂಬೈಯಲ್ಲಿ ನಾಟಕ, ಯಕ್ಷಗಾನ, ತಾಳಮದ್ದಳೆ ಸೇರಿದಂತೆ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಿರುವ ನಡುವೆಯೂ ಹರಿಕಥಾ ಕಲೆಗೆ ಉತ್ತಮ ಪ್ರೋತ್ಸಾಹ ದೊರೆತಿರುವುದು ಶ್ಲಾಘನೀಯವಾಗಿದೆ.
ತೋನ್ಸೆ ಪುಷ್ಕಳ ಕುಮಾರ್ ಅವರ ಪ್ರಸ್ತುತಿಯಲ್ಲಿ ಪ್ರೇಕ್ಷಕರನ್ನು ಸೆಳೆಯುವ ವಿಶಿಷ್ಟ ಕಲಾವಂತಿಕೆ ಇರುವುದರಿಂದ ಎಲ್ಲೆಡೆ ಕಾರ್ಯಕ್ರಮವು ಮೆಚ್ಚುಗೆಗೆ ಪಾತ್ರವಾಯಿತು. ಸುಮಾರು ಎರಡೂವರೆ ಗಂಟೆಗಳ ಕಾಲ ನಡೆದ ಪ್ರತಿಯೊಂದು ಹರಿಕಥಾ ಕಾರ್ಯಕ್ರಮದಲ್ಲೂ ಪೀಠಿಕೆ, ಕಥಾವಸ್ತು, ಭಕ್ತಿ ಸಂದೇಶ, ಸಂಗೀತ, ಸಾಂದರ್ಭಿಕ ರಂಜನೆಗೆ ಪೂರಕವಾದ ರಾಗಪ್ರಯೋಗ, ನೃತ್ಯಗತಿಗಳು ಹಾಗೂ ಸಾಮಾಜಿಕ ಜೀವನಕ್ಕೆ ಸಂಬಂಧಿಸಿದ ಉಪಕಥೆಗಳ ರಸಾನುಭವವನ್ನು ಕಲಾಭಿಮಾನಿಗಳಿಗೆ ಉಣಬಡಿಸುವ ಮೂಲಕ ಪ್ರೇಕ್ಷಕರನ್ನು ರಂಜಿಸಿದರು.
ಕಾರ್ಯಕ್ರಮದ ಯಶಸ್ಸಿಗೆ ಸುಸಜ್ಜಿತ ಹಿಮ್ಮೇಳವೂ ಪ್ರಮುಖ ಕಾರಣವಾಯಿತು. ಹಿರಿಯ ಶಾಸ್ತ್ರೀಯ ಹಾರ್ಮೋನಿಯಂ ವಾದಕ ಶೇಖರ್ ಸಸಿಹಿತ್ಲು, ಪ್ರಸಿದ್ಧ ತಬಲಾ ವಾದಕ ಜನಾರ್ದನ ಸಾಲಿಯಾನ್ ಹಾಗೂ ತಾಳದಲ್ಲಿ ರಮೇಶ್ ಸಾಲಿಯಾನ್ ಅವರು ಉತ್ತಮ ಸಹಕಾರ ನೀಡಿದರು.
ನವಾಹದ ಸಮಾರೋಪ ಸಮಾರಂಭದಲ್ಲಿ ಮುಂಬೈನ ಕಲಾಜಗತ್ತು, ಕಲಾಸೌರಭ ಹಾಗೂ ಹರಿಕಥಾ ಸಂಘಟನಾ ಸಮಿತಿಗಳ ವತಿಯಿಂದ ಹರಿದಾಸ ತೋನ್ಸೆ ಪುಷ್ಕಳ ಕುಮಾರ್ ಅವರಿಗೆ ‘ಕೀರ್ತನ ಕಲಾಮಣಿ’ ಬಿರುದು ನೀಡಿ ಗೌರವಿಸಲಾಯಿತು. ಹಿರಿಯ ಹಾರ್ಮೋನಿಯಂ ವಾದಕ ಶೇಖರ್ ಸಸಿಹಿತ್ಲು ಅವರಿಗೆ ‘ನಾದಯೋಗಿ’ ಪ್ರಶಸ್ತಿ ಪ್ರದಾನ ಮಾಡಲಾಯಿತು.

