ಮಂಗಳೂರು: ಕರಾವಳಿ ಸಂಗೀತ ಕಲಾವಿದರ ಒಕ್ಕೂಟದ 19ನೇ ವಾರ್ಷಿಕೋತ್ಸವದ ಅಂಗವಾಗಿ ‘ಸ್ವರ ಕುಡ್ಲ–ಸೀಸನ್ 8’ರ ಗ್ರ್ಯಾಂಡ್ ಫಿನಾಲೆ, ವಾರ್ಷಿಕೋತ್ಸವ ಸಮಾರಂಭ, ಪ್ರಶಸ್ತಿ ಪ್ರದಾನ, ಅಭಿನಂದನಾ ಪುರಸ್ಕಾರ ಹಾಗೂ ವಿದ್ಯಾರ್ಥಿವೇತನ ವಿತರಣೆ ಕಾರ್ಯಕ್ರಮ ಸೆ.26ರಂದು ಮಧ್ಯಾಹ್ನ 2 ಗಂಟೆಯಿಂದ ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ನಡೆಯಲಿದೆ ಎಂದು ಒಕ್ಕೂಟದ ಅಧ್ಯಕ್ಷ ಧನುರಾಜ್ ಅತ್ತಾವರ ತಿಳಿಸಿದ್ದಾರೆ.

2007ರಲ್ಲಿ ಅಸ್ತಿತ್ವಕ್ಕೆ ಬಂದಿರುವ ಕರಾವಳಿ ಸಂಗೀತ ಕಲಾವಿದರ ಒಕ್ಕೂಟವು ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಗಾಯಕರು, ಹಿನ್ನೆಲೆ ವಾದಕರು ಸೇರಿದಂತೆ 350ಕ್ಕೂ ಅಧಿಕ ಸದಸ್ಯರನ್ನು ಹೊಂದಿರುವ ನೋಂದಾಯಿತ ಸಂಸ್ಥೆಯಾಗಿದೆ. ಸಂಗೀತ ಕ್ಷೇತ್ರದ ಅಶಕ್ತ ಕಲಾವಿದರಿಗೆ ಆರ್ಥಿಕ ನೆರವು, ಹಿರಿಯ ಕಲಾ ಸಾಧಕರಿಗೆ ಪ್ರಶಸ್ತಿ, ಯುವ ಪ್ರತಿಭೆಗಳಿಗೆ ಅಭಿನಂದನಾ ಪುರಸ್ಕಾರ ಹಾಗೂ ಸಂಗೀತ ಪ್ರತಿಭಾನ್ವೇಷಣೆ ಸೇರಿದಂತೆ ವಿವಿಧ ಸಾಮಾಜಿಕ ಮತ್ತು ಕಲಾ ಚಟುವಟಿಕೆಗಳನ್ನು ಒಕ್ಕೂಟ ನಡೆಸುತ್ತಿದೆ. ಕಲಾವಿದರ ಮಕ್ಕಳಿಗೆ ವಿದ್ಯಾರ್ಥಿವೇತನ ನೀಡುವ ಮೂಲಕ ಕುಟುಂಬಗಳಿಗೂ ನೆರವಾಗುತ್ತಿದೆ ಎಂದು ಅವರು ಹೇಳಿದರು.
ಕಾರ್ಯಕ್ರಮವನ್ನು ರಾವ್ ಬ್ರದರ್ಸ್ನ ಮಾಲೀಕರು ಹಾಗೂ ವಿಶ್ವ ಹಿಂದೂ ಪರಿಷತ್, ಸುರತ್ಕಲ್ ಅಧ್ಯಕ್ಷ ಬಿ. ಭಾಸ್ಕರ್ ರಾವ್ ಉದ್ಘಾಟಿಸಲಿದ್ದು, ಒಕ್ಕೂಟದ ಅಧ್ಯಕ್ಷ ಧನುರಾಜ್ ಅತ್ತಾವರ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಹೇರಂಭಾ ಇಂಡಸ್ಟ್ರೀಸ್, ಮುಂಬೈ ಅಧ್ಯಕ್ಷ ಡಾ. ಸದಾಶಿವ ಶೆಟ್ಟಿ ಕುಳೂರು ಕನ್ಯಾನ, ವಿರಾಜಪೇಟೆ ಡಿವೈಎಸ್ಪಿ ಮಹೇಶ್ ಕುಮಾರ್, ನಿವೃತ್ತ ಎಸ್ಪಿ ಹಾಗೂ ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ಅಧ್ಯಕ್ಷ ರಾಮದಾಸ್ ಗೌಡ, ಧಾರ್ಮಿಕ ಮುಖಂಡ ಮಹಾಬಲ ಪೂಜಾರಿ ಕಡಂಬೋಡಿ ಸೇರಿದಂತೆ ಮತ್ತಿತರರು ಭಾಗವಹಿಸಲಿದ್ದಾರೆ.

ಕಾರ್ಯಕ್ರಮದ ಅಂಗವಾಗಿ ಒಕ್ಕೂಟದ ಸದಸ್ಯರಿಂದ ಗಾನ ಸರಸ್ವತಿ ಎಸ್. ಜಾನಕಿ ಅವರಿಗೆ ಗೌರವಾರ್ಥ ‘ಸ್ವರ ನಮನ’ ವಿಶೇಷ ಸಂಗೀತ ಕಾರ್ಯಕ್ರಮ ಹಾಗೂ ಸಂಗೀತ ರಸಮಂಜರಿ ನಡೆಯಲಿದೆ.
‘ಸ್ವರ ಕುಡ್ಲ–ಸೀಸನ್ 8’ರ ಗ್ರ್ಯಾಂಡ್ ಫಿನಾಲೆಯ ಪೂರ್ವಭಾವಿಯಾಗಿ ಆಡಿಷನ್ ಹಾಗೂ ಸೆಮಿಫೈನಲ್ ಸುತ್ತು ಸೆ.13ರಂದು ಬೆಳಿಗ್ಗೆ 9.30ರಿಂದ ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ನಡೆಯಲಿದೆ ಎಂದು ಒಕ್ಕೂಟದ ಮಾಜಿ ಅಧ್ಯಕ್ಷ ಮುರಳೀಧರ್ ಕಾಮತ್ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಉಪಾಧ್ಯಕ್ಷ ರಾಮ್ ಕುಮಾರ್ ಅಮೀನ್, ಗುರುಪ್ರಿಯ ಕಾಮತ್, ಮಲ್ಲಿಕಾ ಶೆಟ್ಟಿ, ಪುಷ್ಕಲ್ ಕುಮಾರ್, ನವಗಿರಿ ಗಣೇಶ್ ಉಪಸ್ಥಿತರಿದ್ದರು

