ಮಂಗಳೂರು: ಕರ್ನಾಟಕದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ಪ್ರಕ್ರಿಯೆ ರದ್ದುಗೊಳಿಸಿ, ಜನವರಿ 2025ರ ಮತದಾರರ ಪಟ್ಟಿಯನ್ನು ಮರುಸ್ಥಾಪಿಸಬೇಕು ಹಾಗೂ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಪ್ರಜಾಪ್ರಭುತ್ವ ಉಳಿಸಿ ಆಂದೋಲನದ ದಕ್ಷಿಣ ಕನ್ನಡ ಜಿಲ್ಲಾ ಘಟಕದ ವತಿಯಿಂದ ಜಿಲ್ಲಾಧಿಕಾರಿ ಮೂಲಕ ಮುಖ್ಯ ಚುನಾವಣಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಎಸ್ಐಆರ್ ಪ್ರಕ್ರಿಯೆಯಿಂದ ಅರ್ಹ ಮತದಾರರ ಹೆಸರುಗಳು ಅಳಿಸಲ್ಪಡುವ ಆತಂಕವಿದ್ದು, ಫಾರಂ 7ರ ದುರುಪಯೋಗದ ಮೂಲಕ ಅಲ್ಪಸಂಖ್ಯಾತರು ಹಾಗೂ ದಲಿತರನ್ನು ಗುರಿಯಾಗಿಸುವ ಸಾಧ್ಯತೆಯಿದೆ ಎಂದು ಸಂಘಟನೆ ಆರೋಪಿಸಿತು. ಮತದಾರರ ಪಟ್ಟಿಯ ಪರಿಷ್ಕರಣೆ ಪಾರದರ್ಶಕವಾಗಿ ನಡೆಯಬೇಕು ಹಾಗೂ ಅರ್ಹರು ಮತದಾನದ ಹಕ್ಕಿನಿಂದ ವಂಚಿತರಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಫಾ. ವಿನಯ್ ಮಸ್ಕರೇನಸ್, ರಾಮಣ್ಣ ವಿಟ್ಲ, ಮುನೀರ್ ಪದ್ರೆಂಗಿ, ಮುಹಮ್ಮದ್ ಸೈಫ್, ಅನ್ವರ್ ಸಾದತ್, ನೀತು ಡಿಸೋಜ, ಅಮೀನ್ ಅಹ್ಸನ್, ನ್ಯಾಯವಾದಿ ಲುಕ್ಮಾನ್ ನೆಲ್ಯಾಡಿ ಮತ್ತಿತರರು ಉಪಸ್ಥಿತರಿದ್ದರು.


